– ಡಿವಿ, ಶೋಭಾ, ನಳಿನ್ ಮೂವರೂ ಒಂದೇ ಕ್ಷೇತ್ರದವರು
– ಬೇರೆ ಬೇರೆ ಕ್ಷೇತ್ರದ ಸಂಸದರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರ ಅಪರೂಪದ ಸಾಧನೆ ಮಾಡಿದೆ. ಒಂದೇ ಕ್ಷೇತ್ರದ ವ್ಯಾಪ್ತಿಗೆ ಬರುವ ಮೂವರು ವ್ಯಕ್ತಿಗಳು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಈ ಬಾರಿಯ ಲೋಕಸಭಾ ಚುನಾವಣೆಯ ಅಖಾಡದಲ್ಲಿಯೂ ಟಿಕೆಟ್ ಪಡೆದಿದ್ದು, ಮತ್ತೆ ಸಂಸದರಾಗುವ ನಿರೀಕ್ಷೆಯಲ್ಲಿದ್ದಾರೆ.
ಹೌದು. ಸಚಿವ ಡಿ.ವಿ ಸದಾನಂದ ಗೌಡ, ಸಂಸದರಾದ ಶೋಭಾ ಕರಂದ್ಲಾಜೆ ಹಾಗೂ ನಳಿನ್ ಕುಮಾರ್ ಕಟೀಲ್ ಈ ಮೂವರು ಒಂದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತಾರೆ. ವಿಶೇಷವೆಂದರೆ ಒಂದೇ ಕ್ಷೇತ್ರದವರಾದ ಇವರುಗಳು ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ಸಂಸದರಾಗಿ ಆಯ್ಕೆಯಾಗಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಬೇರೆ ಬೇರೆ ಕಡೆಯಿಂದ ಬಿಜೆಪಿಯಿಂದಲೇ ಅಖಾಡಕ್ಕೆ ಇಳಿದಿದ್ದಾರೆ.
Advertisement
Advertisement
ಸದಾನಂದ ಗೌಡ:
ಇವರು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡದವರು. ಇವರು 1994 ರಿಂದ 2004 ರವರೆಗೆ ಎರಡು ಅವಧಿಗಳಲ್ಲಿ ಪುತ್ತೂರಿನಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 2004ರಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ವೀರಪ್ಪ ಮೊಯ್ಲಿಯವರನ್ನು ಸೋಲಿಸಿ ಸಂಸದರಾದ್ರು. ಬಳಿಕ 2009ರಲ್ಲಿ ಕಾಂಗ್ರೆಸ್ಸಿನ ಜಯಪ್ರಕಾಶ್ ಹೆಗ್ಡೆಯವರನ್ನು ಸೋಲಿಸಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಲೋಕಸಭೆಗೆ ಪ್ರವೇಶ ಮಾಡಿದ್ರು.
Advertisement
ಕಳೆದ ಬಾರಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸಿ. ನಾರಾಯಣ ಸ್ವಾಮಿಯವರನ್ನು ಸೋಲಿಸಿ ಸಂಸದರಾಗಿ ಆಯ್ಕೆಗೊಂಡಿದ್ದರು. ಅಲ್ಲದೆ ಕೇಂದ್ರ ಸರ್ಕಾರದಲ್ಲಿ ಸಚಿವರೂ ಆಗಿದ್ದರು. ಈ ಮಧ್ಯೆ 2011 ರಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಹೆಮ್ಮೆ ಇವರಿಗಿದೆ. ಇದೀಗ ಈ ಬಾರಿ ಲೋಕಸಭಾ ಚುನಾವಣೆಯಲ್ಲಿಯೂ ಡಿವಿಯವರು ಬೆಂಗಳೂರು ಉತ್ತರದಿಂದ ಅಖಾಡಕ್ಕಿಳಿದಿದ್ದಾರೆ.
Advertisement
ಶೋಭಾ ಕರಂದ್ಲಾಜೆ:
ಚಾರ್ವಾಕ ಗ್ರಾಮ ಕರಂದ್ಲಾಜೆಯ ಶೋಭಾ ಅವರು 2004ರಲ್ಲಿ ವಿಧಾನಪರಿಷತ್ ಸದಸ್ಯರಾಗುವ ಮೂಲಕ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದಾರೆ. ಮೊದಲು ಪುತ್ತೂರು ತಾಲೂಕಿಗೆ ಬರುತ್ತಿದ್ದ ಚಾರ್ವಾಕ ಗ್ರಾಮ ಇದೀಗ ಕಡಬ ತಾಲೂಕಿನ ಅಡಿಯಲ್ಲಿ ಬರುತ್ತದೆ. ಹೀಗಾಗಿ ಈ ಗ್ರಾಮ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ.
ಶೋಭಾ ಅವರು 2008ರಲ್ಲಿ ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ತದನಂತರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯಪ್ರಕಾಶ್ ಹೆಗ್ಡೆಯವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾದರು. ಇದೀಗ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ಇದೇ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ನಳಿನ್ ಕುಮಾರ್ ಕಟೀಲ್:
ಇವರು ಮೂಲತಃ ಪಾಲ್ತಾಡಿ ಗ್ರಾಮದ ಕುಂಜಾಡಿಯವರಾಗಿದ್ದು, ಮಂಗಳೂರಿನಲ್ಲಿ ನೆಲೆಸಿದ್ದಾರೆ. ಆದ್ರೆ ಇವರ ತಾಯಿ ಈಗಲೂ ಕುಂಜಾಡಿಯಲ್ಲೇ ಇದ್ದಾರೆ. ಹೀಗಾಗಿ ನಳಿನ್ ಇಲ್ಲಿಗೆ ಆಗಾಗ ಬರುತ್ತಿರುತ್ತಾರೆ.
ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ಬೆಳೆದ ಇವರು 2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಪ್ರಯತ್ನದಲ್ಲೇ ಗೆಲುವು ತನ್ನದಾಗಿಸಿಕೊಂಡರು. 2014 ಚುನಾವಣೆಯಲ್ಲೂ ಜಯಗಳಿಸಿದ್ದರು. 2 ಬಾರಿಯೂ ಕಾಂಗ್ರೆಸ್‍ನ ಪ್ರಭಾವಿ ನಾಯಕ ಜನಾರ್ದನ ಪೂಜಾರಿಯವರನ್ನು ಸೋಲಿಸಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿಯೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.
ಒಟ್ಟಿನಲ್ಲಿ ಒಂದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಮೂವರು ಸಂಸದರಾಗುವ ಮೂಲಕ ಈ ಕ್ಷೇತ್ರ ಸಾಧನೆ ಮಾಡಿದೆ. ಅಲ್ಲದೆ ಲೋಕಸಭಾ ಚುನಾವಣೆಯಲ್ಲಿಯೂ ಇದೇ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಈ ಮೂವರು ರಾಜ್ಯದ ವಿವಿಧ ಕಡೆಗಳಲ್ಲಿ ಸ್ಪರ್ಧಿಸುತ್ತಿರುವುದು ವಿಶೇಷವಾಗಿದೆ.