ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರು ತುರ್ತು ಸುದ್ದಿಗೋಷ್ಠಿಯಲ್ಲಿ ಅನಾರೋಗ್ಯ ಕಾರಣದಿಂದ ಮೃತಪಟ್ಟ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿ ಅವರನ್ನು ನೆನೆದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್, ಅನಿವಾರ್ಯವಾಗಿ ಉಳಿದ ಅನರ್ಹತೆ ಮತ್ತು ರಾಜೀನಾಮೆಗೆ ಸಂಬಂಧಿಸಿದ ಪತ್ರಗಳನ್ನು ವಿಲೇವಾರಿ ಮಾಡಲೇಬೇಕಾಗಿದೆ. ಜೈಪಾಲ್ ರೆಡ್ಡಿಯವರನ್ನ ಕಳೆದುಕೊಂಡಿದ್ದು ಇಂದು ನನಗೆ ಅತ್ಯಂತ ದುಃಖದ ದಿನವಾಗಿದೆ. ನನ್ನ ಸಾರ್ವಜನಿಕ ಬದುಕಿಗೆ ಬಹಳಷ್ಟು ಪರಿಣಾಮಕಾರಿಯಾದ ಸಲಹೆ, ಮಾರ್ಗದರ್ಶನ ಕೊಟ್ಟಿದ್ದರು. ವೈಯಕ್ತಿಕ ಬದುಕಿನಲ್ಲಿ ಸುಮಾರು 35 ವರ್ಷದಿಂದ ನನಗೆ ಹಿರಿಯ ಸಹೋದರನಂತೆ ನನ್ನನ್ನು ಪ್ರೀತಿಸಿದರು. ಅತ್ಯುತ್ತಮ ಸಂಸದೀಯ ಪಟುವಾಗಿದ್ದರು ಎಂದು ಜೈಪಾಲ್ ರೆಡ್ಡಿ ಬಗ್ಗೆ ಮಾತನಾಡಿದರು.
ಅತ್ಯಂತ ಪ್ರಮಾಣಿಕ ರಾಜಕಾರಣಿಯಾಗಿದ್ದರು. ವಿಶೇಷವಾಗಿ ಪಕ್ಷಾಂತರ ನಿಷೇಧ ಕಾಯ್ದೆ ಪಾರ್ಲಿಮೆಂಟ್‍ನಲ್ಲಿ ಬಂದಾಗ ಇದರಲ್ಲಿ ಭಾಗವಹಿಸಿ ಜೈಪಾಲ್ ರೆಡ್ಡಿ ಅವರು ಮಾತನಾಡಿದ್ದರು. ಜೈಪಾಲ್ ರೆಡ್ಡಿ ಅವರು 1969ರಲ್ಲಿ ಉಪಚುನಾವಣೆ ಮೂಲಕ ಆಂಧ್ರ ಪ್ರದೇಶದ ವಿಧಾನಸಭೆಗೆ ಆಯ್ಕೆಯಾಗಿದ್ದರು. 1984ರ ವರೆಗೂ ವಿಧಾನಸಭೆಯ ಸದಸ್ಯರಾಗಿರುತ್ತಾರೆ. ಕಾಂಗ್ರೆಸ್ ಪಕ್ಷದ ತುರ್ತು ಪರಿಸ್ಥಿತಿಯಿಂದ ವಿರೋಧಿಸಿ ಕಾಂಗ್ರೆಸ್‍ನಿಂದ ಹೊರ ಬೀಳುತ್ತಾರೆ. 1985 ರಿಂದ 5 ಬಾರಿ ಲೋಕಸಭೆಯಲ್ಲಿ ಎರಡು ಸಂದರ್ಭದಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿ ಬರುತ್ತಾರೆ. ಕೇಂದ್ರದ ಮಂತ್ರಿಯಾಗಿಗೂ ಕೆಲಸ ಮಾಡಿದ್ದಾರೆ ಎಂದು ಜೈಪಾಲ್ ರೆಡ್ಡಿಯನ್ನ ನೆನೆದು ಸ್ಪೀಕರ್ ರಮೇಶ್ ಕುಮಾರ್ ಕಣ್ಣೀರಿಟ್ಟರು.
ಅಟಲ್ ವಾಜಪೇಯಿ, ಗೀತಾ ಚಟರ್ಜಿ, ಜಾರ್ಜ್ ಫರ್ನಾಂಡೀಸ್, ಇಂತಹ ಮೇರು ವ್ಯಕ್ತಿಗಳೆಲ್ಲಾ ಸಾರ್ವಜನಿಕ ಜೀವನದಲ್ಲಿದ್ರಾ, ನಮ್ಮ ಪಾರ್ಲೀಮೆಂಟಿನಲ್ಲಿ ಇದ್ದಾರ, ನಾವು ಎಲ್ಲಿದ್ದೇವೆ. ನನ್ನ ನಾಲ್ಕು ದಶಕದ ರಾಜಕೀಯ ಜೀವನದ ಪ್ರಮುಖ ಘಟ್ಟದಲ್ಲಿ ಬಹುಶ: ಕಡೆಯ ಘಟ್ಟ ಆಗುತ್ತೆ ಎಂದು ತಿಳಿದುಕೊಂಡಿದ್ದೇನೆ. ನನ್ನ ಮೇಲೆ ಅತ್ಯಂತ ಜವಾಬ್ದಾರಿ ಇರುವುದರಿಂದ ಇಂತಹ ತೀರ್ಮಾನ ತೆಗೆದುಕೊಂಡಿದ್ದೇನೆ ಎಂದು ಸ್ಪೀಕರ್ ಹೇಳಿದರು.
ಸೋಮವಾರ ಕಲಾಪದ ಕಾರ್ಯಸೂಚಿಯಲ್ಲಿ ನೂತನ ಸಿಎಂ ಬಹುಮತ ಸಾಬೀತು ಹಾಗೂ ಧನವಿನಿಯೋಗ ಮಸೂದೆ ಮೇಲೆ ಚರ್ಚೆ ಎರಡು ನಡೆಯಲಿದೆ. ಎಲ್ಲ ಶಾಸಕರು ಸೋಮವಾರ 11 ಗಂಟೆಗೆ ವಿಧಾನಸೌಧಕ್ಕೆ ಬರಬೇಕು ಎಂದು ಸಭಾಧ್ಯಕ್ಷನಾಗಿ ನಾನು ಕಾರ್ಯದರ್ಶಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಕಾರ್ಯಸೂಚನೆಯಲ್ಲಿ ಧನವಿನಿಯೋಗ ಮಸೂದೆಯ ಬಗ್ಗೆ ಸೂಚನಾಪತ್ರ ಕಳುಹಿಸಿಕೊಟ್ಟಿದ್ದೇನೆ. ನಮಗೆ ಎರಡೇ ದಿನ ಸಮಯ ಇದ್ದಿದ್ದರಿಂದ ಶನಿವಾರ ಭಾನುವಾರ ಕೆಲಸ ನಡೆದಿದೆ ಎಂದರು.