ಕೋಲಾರ: ನ್ಯಾಯಾಲಯದ ಆದೇಶವನ್ನು ಸ್ವಾಗತಿಸುತ್ತೇನೆ. ಮುಂದೆ ಕಾಲಕಾಲಕ್ಕೆ ತಕ್ಕಂತೆ ಉಳಿದ ಕೆಲಸ ನಿರ್ವಹಿಸುವೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಸ್ಪೀಕರ್, ಸುಪ್ರೀಂಕೋರ್ಟ್ ನನ್ನ ಮೇಲೆ ವಿಧಿಸಿದ ಕರ್ತವ್ಯ ನಿರ್ವಹಿಸುತ್ತೇನೆ. ನ್ಯಾಯಧೀಶರು ನೀಡಿದ ಗೌರವವನ್ನು ಸಂವಿಧಾನದ ಪ್ರಕಾರ ವಿವೇಚನೆಯಿಂದ ಪಾಲಿಸುವೆ. ಇದನ್ನೇ ಲಾಬಿ ಮಾಡದೇ ಗೌರವವಾಗಿ ಸ್ವೀಕರಿಸಿ ವಿಳಂಬ ಮಾಡದೇ ಕೆಲಸ ಮುಗಿಸುತ್ತೇನೆ ಎಂದು ತಿಳಿಸಿದರು.
ಸದನದಲ್ಲಿ ಗುರುವಾರ ವಿಶ್ವಾಸಮತಯಾಚನೆ ನಡೆಸಲಾಗುತ್ತದೆ. ಶಾಸಕರು ಅಧಿವೇಶನಕ್ಕೆ ಬರುವುದು ಬಿಡುವುದು ಅವರಿಗೆ ಬಿಟ್ಟಿದ್ದು.ಪ್ರಕಟವಾದ ಆದೇಶದಿಂದ ಯಾರು ಗೆದ್ದಿಲ್ಲ, ಯಾರೂ ಸೋತಿಲ್ಲ. ಪ್ರಜಾಪ್ರಭುತ್ವ ಸಂಸದೀಯ ಸಂವಿಧಾನದ ಪ್ರಕಾರ ಎಲ್ಲರಿಗೂ ಗೆಲುವು ಸಿಕ್ಕಿದೆ. ಸಂವಿಧಾನಕ್ಕೆ ನಾನು ತಲೆಬಾಗುತ್ತೇನೆಯೇ ಹೊರತು ಬೇರೆ ಯಾರಿಗೂ ನಾನು ತಲೆ ಬಾಗಲ್ಲ ಎಂದರು.
ಸಂಸದ ಉಮೇಶ್ ಜಾಧವ್ ಅವರ ಕೇಸ್‍ನಲ್ಲಿ ಏನು ಮಾಡಿದ್ದೇನೋ ಅದನ್ನೇ ಈಗ ಮಾಡುತ್ತೇನೆ. ಸುಪ್ರೀಂ ಕೋರ್ಟ್ ಹೇಳಿದಂತೆ ಶಾಸಕರ ವಿಚಾರಣೆ ನಡೆಯಲಿದೆ. ಅವರು ಹಾಜರಾಗುತ್ತಾರೋ ಬಿಡುತ್ತಾರೋ ನನಗೆ ಗೊತ್ತಿಲ್ಲ. ಅತೃಪ್ತ ಅತೃಪ್ತರು ಯಾರೂ ನನಗೆ ಗೊತ್ತಿಲ್ಲ. ಅವರೆಲ್ಲರೂ ನನ್ನ ಆತ್ಮೀಯರೇ. ಅವರು ಕೊರಗಿನಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನ್ಯಾಯಾಧೀಶರು ನನ್ನ ಮೇಲೆ ದೊಡ್ಡ ಜವಾಬ್ದಾರಿ ವಹಿಸಿದ್ದಾರೆ. ನಾನು ಅದನ್ನು ಉಳಿಸಿಕೊಂಡು ಸಾಮಾನ್ಯರಂತೆ ಸಾಮಾನ್ಯನಾಗಿ ತೀರ್ಮಾನ ಕೈಗೊಳ್ಳುತ್ತೇನೆ. ಗುರುವಾರ ಅಧಿವೇಶನವು ನಾಳೆ ನಡೆಯಲಿದೆ. ಸದನದ ನಡೆಯುವ ಹಾದಿಯಲ್ಲಿ ಹಂತ ಹಂತವಾಗಿ ಉಳಿದ ಕೆಲಸ ಮಾಡುತ್ತೇನೆ. ನನ್ನ ಅಧಿಕಾರವನ್ನು ಕೋರ್ಟ್ ಎತ್ತಿ ಹಿಡಿದಿದೆ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ಕಾಲವನ್ನು ನಿಗದಿ ಮಾಡಿಲ್ಲ. ಹಾಗಂತ ನಾನು ಯಾರ ಮನವೊಲಿಕೆಗೆ ಮುಂದಾಗಿ ತೀರ್ಮಾನವನ್ನು ಮುಂದೂಡುವುದಿಲ್ಲ. ಸಂವಿಧಾನ ಯಾರ ಕೈಗೂ ಸಿಕ್ಕು ನರಳಬಾರದು, ಅದು ವಿಜೃಂಭಿಸಬೇಕು. ಎಲ್ಲರೂ ಅದನ್ನು ಗೌರವಿಸುವಂತೆ ಕಾರ್ಯನಿರ್ವಹಿಸುತ್ತೇನೆ ಎಂದರು.
ಶಾಸಕರ ರಾಜೀನಾಮೆ ಅಂಗೀಕರಿಸುವುದೋ ಅಥವಾ ಅನರ್ಹತೆ ನಿರ್ಧಾರ ಕೈಗೊಳ್ಳುವುದೋ ಎನ್ನುವುದರ ಬಗ್ಗೆ ಸ್ಪೀಕರ್ ಯಾವುದೇ ಸ್ಪಷ್ಟವಾದ ನಿರ್ಧಾರವನ್ನು ತಿಳಿಸಲಿಲ್ಲ.