ಕೋಲಾರ: ಎಲ್ಲಾ ಗೌಡರಿಗೆ ಬಿಟ್ಟಿದ್ದೇವೆ, ಗೌಡರು ಹೇಳಿಕೊಟ್ಟಿದ್ದನ್ನ ಕೇಳೋದಷ್ಟೇ ಕೆಲಸ ಎಂದು ಸ್ಪೀಕರ್ ರಮೇಶ್ ಕುಮಾರ್ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಕೋಲಾರ ತಾಲೂಕು ದೊಡ್ಡಹಸಾಳ ಗ್ರಾಮದಲ್ಲಿ ದಿವಂಗತ ವೆಂಕಟಸ್ವಾಮಿಗೌಡ ಅವರ ಸ್ಮರಣಾರ್ಥ ಅವರ ಮಗ ಮರೀಗೌಡರು ನೂತನವಾಗಿ ನಿರ್ಮಾಣ ಮಾಡಿ ದಾನವಾಗಿ ಕೊಟ್ಟ ಆರೋಗ್ಯ ವಿಸ್ತರಣಾ ಕೇಂದ್ರದ ಕಟ್ಟಡವನ್ನು ಸ್ಪೀಕರ್ ರಮೇಶ್‍ಕುಮಾರ್ ಉದ್ಘಾಟನೆ ಮಾಡಿದರು.
ಬಳಿಕ ಮಾಧ್ಯಮದೊಂದಿಗೆ ಮಾತನಾಡುವ ವೇಳೆ ನೂತನ ಬಜೆಟ್‍ನಲ್ಲಿ ಜಿಲ್ಲೆಗೆ ಯಾವೆಲ್ಲಾ ಕೊಡುಗೆಗಳು ಸಿಗುವ ನಿರೀಕ್ಷೆ ಇದೆ ಎನ್ನುವ ಪ್ರಶ್ನೆಗೆ, ನಾನು ಸದ್ಯ ಮೇಲೆ ಕುಳಿತುಕೊಳ್ಳವವನು, ಕೋಲಾರ ಶಾಸಕ ಶ್ರೀನಿವಾಸಗೌಡ ಸೇರಿದಂತೆ, ಈ ಬಾರಿ ಎಲ್ಲಾ ಗೌಡರಿಗೆ ಬಿಟ್ಟಿದ್ದೇವೆ ಎಂದು ಎರಡು ಅರ್ಥದಲ್ಲಿ ರಮೇಶ್ ಕುಮಾರ್ ಹಾಸ್ಯ ಚಟಾಕಿ ಬೀಸಿದರು.
ಸದ್ಯ ನೂತನ ಸಮ್ಮಿಶ್ರ ಸರ್ಕಾರ ಸ್ಪೀಕರ್ ಆಗಿರುವ ರಮೇಶ್ ಕುಮಾರ್ ಅವರ ಮಾತು ಅಚ್ಚರಿಗೆ ಕಾರಣವಾಗಿದ್ದು, ಸದ್ಯ ಅವರ ಹೇಳಿಕೆ ಸ್ಪೀಕರ್ ಸ್ಥಾನ ಸಿಕ್ಕಿರುವ ಅಸಮಾಧಾನವೋ ಅಥವಾ ಎಲ್ಲಾ ದೇವೇಗೌಡರೆ ನಿರ್ಧಾರ ಮಾಡುತ್ತಿರುವುದಕ್ಕೆ ಆಕ್ಷೇಪವೋ ಎನ್ನುವುದು ತಿಳಿದು ಬಂದಿಲ್ಲ.
ಇದೇ ವೇಳೆ ಕೆಸಿ ವ್ಯಾಲಿ ಯೋಜನೆಯನ್ನು ಪ್ರಶ್ನಿಸಿ ನೀರಾವರಿ ಹೋರಾಟಗಾರರು ಹೈಕೋರ್ಟ್‍ನಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತು ಪ್ರತಿಕ್ರಿಯಿಸಿ ಸಮಯ ಎಲ್ಲದಕ್ಕೂ ಉತ್ತರ ಹೇಳಲಿದೆ. ಜನರು ಉತ್ತರ ಹೇಳಲಿದ್ದಾರೆ ಎಂದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಕೋಲಾರ ಶಾಸಕ ಕೆ ಶ್ರೀನಿವಾಸಗೌಡ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.