ಬೆಂಗಳೂರು: ಈಗಾಗಲೇ 11 ಮಂದಿ ರಾಜೀನಾಮೆ ಪತ್ರವನ್ನು ಕೊಟ್ಟಿದ್ದಾರೆ. ನಾಳೆ ಭಾನುವಾರವಾಗಿದ್ದು, ಸೋಮವಾರ ನಾನು ಇರಲ್ಲ. ಹೀಗಾಗಿ ಮಂಗಳವಾರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಶಾಸಕರ ರಾಜೀನಾಮೆ ಕುರಿತು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ಕಚೇರಿಗೆ 11 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ನಮ್ಮ ಕಾರ್ಯದರ್ಶಿ ಹೇಳಿದ್ದಾರೆ. ಭಾನುವಾರ ಕಚೇರಿ ಇರಲ್ಲ. ಸೋಮವಾರ ನಾನು ವೈಯಕ್ತಿಕ ಕಾರಣಗಳಿಂದ ಕಚೇರಿಗೆ ಬರುವುದಿಲ್ಲ. ಹಾಗಾಗಿ ಮಂಗಳವಾರ ಬಂದು ರಾಜೀನಾಮೆ ಪರಿಶೀಲಿಸುತ್ತೇನೆ ಎಂದು ಹೇಳಿದ್ದಾರೆ.
ನಾನು ನನ್ನ ವೈಯಕ್ತಿಕ ಕೆಲಸ ಮುಗಿಸಿ ವಿಧಾನಸೌಧಕ್ಕೆ ಹೋಗಿ ಅಲ್ಲಿ ಸಭೆ ನಡೆಸುತ್ತಿದೆ. ಆದರೆ ಯಾರು ಕೂಡ ನನಗೆ ಕರೆ ಮಾಡಿ ಅಥವಾ ಪತ್ರದ ಮೂಲಕ ಅಪಾಯಿಂಟ್‍ಮೆಂಟ್ ತೆಗೆದುಕೊಂಡಿಲ್ಲ. ಭೇಟಿ ಮಾಡಬೇಕು ಎಂದು ಶಾಸಕರು ಮನಸ್ಸಿನಲ್ಲಿ ಎಂದುಕೊಂಡು ಬಂದರೆ ನನಗೆ ಅದು ಹೇಗೆ ಗೊತ್ತಾಗುತ್ತೆ. ಅವರು ಮೊದಲೇ ಕರೆ ಮಾಡಿ ನಾವು ಬರುತ್ತಿದ್ದೇವೆ ಎಂದು ಹೇಳಿದ್ದರೆ, ನಾನು ಅಲ್ಲಿಯೇ ಇರುತ್ತದೆ ಎಂದರು.
ಕಚೇರಿಗೆ 11 ಶಾಸಕರು ರಾಜೀನಾಮೆ ಸಲ್ಲಿಸಿದ್ದಾರೆ. 11 ಜನ ಶಾಸಕರಿಗೆ ಸ್ವೀಕೃತಿ ಪತ್ರ ನೀಡಿ. ನಾನು ಮಂಗಳವಾರ ಬಂದು ಮುಂದಿನ ಕ್ರಮ ಜರುಗಿಸುತ್ತೇನೆ ಎಂದು ಆಪ್ತ ಕಾರ್ಯದರ್ಶಿ ಬಳಿ ಹೇಳಿದ್ದೇನೆ. ನಾನು ಕಚೇರಿಯಲ್ಲಿ ಇಲ್ಲ ಮಾತ್ರಕ್ಕೆ ಅವರನ್ನು ವಾಪಸ್ ಕಳುಹಿಸಿಲ್ಲ. ಕಾನೂನು ಪ್ರಕಾರ ಮುಂದಿನ ಎಲ್ಲ ಕ್ರಮವನ್ನು ಜರುಗಿಸುತ್ತೇವೆ. ಭಾನುವಾರ ಕಚೇರಿ ತೆರೆದಿರುವುದಿಲ್ಲ. ಸೋಮವಾರ ನನಗೆ ಪೂರ್ವನಿಯೋಜತ ಕೆಲಸ ಇರುವುದರಿಂದ ನಾನು ಕಚೇರಿಗೆ ಬರುವುದಕ್ಕೆ ಆಗಲ್ಲ. ಮಂಗಳವಾರ ಬಂದು ರಾಜೀನಾಮೆ ಪರಿಶೀಲಿಸುತ್ತೇನೆ ಎಂದು ಹೇಳಿದರು.
ಶಾಸಕರು ರಾಜಭಾವನಕ್ಕಾದರೂ ಹೋಗಲಿ, ರಾಷ್ಟ್ರಭವನಕ್ಕಾದರೂ ಹೋಗಲಿ ಅದು ನನಗೆ ಬೇಡದಿರುವ ವಿಷಯ. ಸ್ಪೀಕರ್ ರಮೇಶ್ ಕುಮಾರ್ ಬಗ್ಗೆ ಕೇಳಿ ನಾನು ನಿಮಗೆ ಹೇಳುತ್ತೇನೆ. ನನ್ನ ಕರ್ತವ್ಯ ಸಂವಿಧಾನ ಬದ್ಧವಾಗಿ ಕಾನೂನು ರೀತಿಯಲ್ಲಿ ಏನು ಇದೆ ಅಷ್ಟಕ್ಕೆ ನಾನು ಸೀಮಿತ. ಬೇರೆ ವಿಷಯ ನನಗೆ ಗೊತ್ತಿಲ್ಲ. ನಾನು ಯಾವುದೇ ಪಕ್ಷದಲ್ಲಿ ಇಲ್ಲ ಹಾಗಾಗಿ ಶಾಸಕರ ರಾಜೀನಾಮೆ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಸರ್ಕಾರ ಬಿದ್ದು ಹೋಗುವುದು, ಬಿಡುವುದು ಸುಪ್ರಿಂ ಕೋರ್ಟ್‍ನ ತೀರ್ಪಿನ ಪ್ರಕಾರ ವಿಧಾನಸಭೆಯಲ್ಲಿ ನಿರ್ಧಾರವಾಗುತ್ತೆ. ಕಚೇರಿಯಲ್ಲಿ ರಾಜೀನಾಮೆ ಕೊಟ್ಟರೆ ಅದು ಸ್ವೀಕರಿಸಲು ಆಗಲ್ಲ. ಅವರು ಖುದ್ದಾಗಿ ನನಗೆ ಕೊಡಬೇಕು. ರಾಜೀನಾಮೆ ಪತ್ರ ತೆಗೆದುಕೊಂಡಿದ್ದೀವಿ ಎಂದು ಸ್ವೀಕೃತಿ ಪತ್ರ ಕೊಡುತ್ತೇವೆ. ಶಾಸಕರು ಅಪಾಯಿಂಟ್‍ಮೆಂಟ್ ಕೇಳಿಲ್ಲ. ಕೇಳಿದರೆ ನಾನು ಕೊಡಲು ನಿರಾಕರಿಸುವುದಿಲ್ಲ. ಇಂದು ಯಾರ್ಯಾರು ಬರುತ್ತಾರೆ ಎಂದು ನನಗೆ ಗೊತ್ತಿಲ್ಲ ಎಂದು ರಮೇಶ್ ಕುಮಾರ್ ಅವರು ಹೇಳಿದ್ದಾರೆ.
ಜೆಡಿಎಸ್ ಮಾಜಿ ಅಧ್ಯಕ್ಷ ವಿಶ್ವನಾಥ್, ರಮೇಶ್ ಜಾರಕಿಹೊಳಿ, ಸೋಮಶೇಖರ್, ಪ್ರತಾಪ್ ಗೌಡ ಪಟೀಲ್, ಗೋಪಾಲಯ್ಯ, ಬಿಸಿ ಪಾಟೀಲ್, ಮಹೇಶ್ ಕುಮಟಳ್ಳಿ, ನಾರಾಯಣ ಗೌಡ, ಭೈರತಿ ಬಸವರಾಜ್, ಶಿವಾರಂ ಹೆಬ್ಬಾರ್, ರಾಮಲಿಂಗಾ ರೆಡ್ಡಿ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ನೀಡಿದ್ದಾರೆ.