ಬೆಂಗಳೂರು: ನಿಯಮಗಳನ್ನು ಪಾಲಿಸದೇ ರಾಜೀನಾಮೆ ಅಂಗೀಕರಿಸುವುದಿಲ್ಲ. ಶಾಸಕರ ರಾಜೀನಾಮೆ ಅಂಗೀಕಾರಕ್ಕೆ ನಾನು ವಿಳಂಬ ಮಾಡಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಮುಂಬೈನಿಂದ ಓಡೋಡಿ ಬಂದ 11 ಶಾಸಕರು ರಾತ್ರಿ ಸ್ಪೀಕರ್ ಕಚೇರಿಗೆ ಬಂದು ತಮ್ಮ ಕೈ ಬರಹದಲ್ಲಿ ರಾಜೀನಾಮೆ ಸಲ್ಲಿಸಿದ್ದಾರೆ. ಅತೃಪ್ತ ಶಾಸಕರ ರಾಜೀನಾಮೆ ಸ್ವೀಕರಿಸಿದ ರಮೇಶ್ ಕುಮಾರ್ ಅವರು ತುರ್ತು ಸುದ್ದಿಗೋಷ್ಠಿ ನಡೆಸಿ ಇಲ್ಲಿಯವರೆಗೆ ನಡೆದ ಪ್ರಕ್ರಿಯೆ ಬಗ್ಗೆ ವಿವರಣೆ ನೀಡಿದರು.
Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರನ್ನು ಉಳಿಸುವುದು ಕಳುಹಿಸುವುದು ನನ್ನ ಕೆಲಸ ಅಲ್ಲ. 40 ವರ್ಷದಿಂದ ಸಾರ್ವಜನಿಕರ ಜೀವನದಲ್ಲಿ ಇದ್ದೇನೆ. ಆದರೆ ಕೆಲ ಮಾಧ್ಯಮಗಳ ವರದಿಗಳು ನನಗೆ ಬೇಸರ ತಂದಿದೆ. ನನ್ನ ಅನುಮಾನಗಳನ್ನು ಬಗೆ ಹರಿಸಿಕೊಳ್ಳಬೇಕಿದೆ. ಈ ಬಗ್ಗೆ ಇಡೀ ರಾತ್ರಿ ಚಿಂತನೆ ನಡೆಸುತ್ತೇನೆ. ಜನರ ಭಾವನೆಗಳಿಗೆ ಬೆಲೆ ಕೊಟ್ಟು ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
Advertisement
Advertisement
ಶನಿವಾರ ಜುಲೈ 6 ರಂದು ಶಾಸಕರು ಕಚೇರಿಗೆ ಬಂದು ರಾಜೀನಾಮೆ ಸಲ್ಲಿಕೆ ಮಾಡಿದ್ದರು. ಆದರೆ ಈ ಬಗ್ಗೆ ನನಗೆ ಮೊದಲು ಮೊಬೈಲ್ ಕರೆ ಅಥವಾ ಪತ್ರದ ಮೂಲಕ ಮಾಹಿತಿ ನೀಡಿರಲಿಲ್ಲ. ನಾನು ಅವರನ್ನು ಬರುವುದನ್ನು ನೋಡಿ ಓಡಿ ಹೋಗಿರಲಿಲ್ಲ. 13 ಶಾಸಕರ ರಾಜೀನಾಮೆ ಪತ್ರದಲ್ಲಿ 8 ಶಾಸಕರ ರಾಜೀನಾಮೆ ನಿಯಮಗಳ ಅನ್ವಯ ಸಲ್ಲಿಕೆ ಆಗಿರಲಿಲ್ಲ. ಆದ್ದರಿಂದಲೇ ಅವರಿಗೆ ಮತ್ತೊಂದು ಅವಕಾಶ ನೀಡಿ ರಾಜೀನಾಮೆ ನೀಡಲು ಸೂಚನೆ ನೀಡಿದ್ದೆ ಎಂದು ತಿಳಿಸಿದರು.
Advertisement
ಉಳಿದ ರಾಜೀನಾಮೆಗಳು ಸಹಜ, ಸ್ವಯಂ ಪ್ರೇರಿತವಾಗಿದೆಯೇ ಎಂಬುದನ್ನು ವಿಚಾರಣೆ ಮಾಡುವುದು ನನ್ನ ಹೊಣೆ. ಜುಲೈ 12 ರಿಂದ ಅಧಿವೇಶನ ಆರಂಭವಾಗುವ ಹಿನ್ನೆಲೆಯಲ್ಲಿ ಶಾಸಕರಿಗೆ ಸಂಜೆಯಿಂದ ಸಂದರ್ಶನಕ್ಕೆ ಅವಕಾಶ ನೀಡಿದ್ದೇನೆ. ಆದರೆ ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ನಾನು ಯಾರ ಒತ್ತಡಕ್ಕೂ ಮಣಿದು ಶಾಸಕರ ರಾಜೀನಾಮೆ ಅಂಗೀಕಾರ ಮಾಡಲು ಸಾಧ್ಯವಿಲ್ಲ. ಪೂರ್ಣ ಪ್ರಮಾಣದಲ್ಲಿ ನಿಯಮಗಳನ್ನು ಪಾಲನೆ ಮಾಡಿ ರಾಜೀನಾಮೆ ಅಂಗೀಕರಿಸುತ್ತೇನೆ ಎಂದರು.
ಈಗಾಗಲೇ ಇತಿಹಾಸದಲ್ಲಿ ಹಲವು ಬಾರಿ ಶಾಸಕರು ಮಂತ್ರಿಗಿರಿಗಾಗಿಯೇ ಪಕ್ಷಾಂತರ ಮಾಡಿದ್ದಾರೆ. ಇದಕ್ಕೆ ತಡೆ ನೀಡಲು ರಾಜೀವ್ ಗಾಂಧಿ ಅವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ದರು. ಸ್ವಚ್ಛ ರಾಜಕಾರಣ ದೇಶಕ್ಕೆ ನೀಡಲು ಈ ಕಾಯ್ದೆಯನ್ನು ಜಾರಿ ಮಾಡಲಾಗಿತ್ತು ಎಂದು ಕೆಲ ಗಣ್ಯರ ಹೇಳಿಕೆಗಳನ್ನು ಸ್ಪೀಕರ್ ಪ್ರಸ್ತಾಪ ಮಾಡಿದರು. ನನಗೆ 100 ವರ್ಷ ಬದುಕುವ ಆಸೆ ಇಲ್ಲ, ಈಗ 70 ವರ್ಷ ಆಗಿದ್ದು ನೆಮ್ಮದಿಯಿಂದ ಸಾವು ಬಯಸುತ್ತೇನೆ ಎಂದು ಹೇಳಿ ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕರು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯ ಆದೇಶ ಪಡೆದು ಸ್ಪೀಕರ್ ಭೇಟಿಗೆ ಆಗಮಿಸಿದ್ದಾರೆ. ಆದರೆ ನನ್ನನ್ನು ಭೇಟಿ ಮಾಡಲು ನ್ಯಾಯಾಲಯದ ಅವಶ್ಯಕತೆ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ನಿಮ್ಮ ಕಾಲಿಗೆ ನಮಸ್ಕರಿಸುತ್ತೇನೆ ಸತ್ಯವನ್ನು ವರದಿ ಮಾಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು. ನಾನು ನಿಯಮಗಳನ್ನು ಪಾಲಿಸದೆ ರಾಜೀನಾಮೆ ಅಂಗೀಕರಿಸುವುದಿಲ್ಲ ಎಂದರು.
ನಾನು ಇಂದು ಶಾಸಕ ರಾಜೀನಾಮೆ ಸ್ವೀಕರಿಸಿದ್ದು, ಅವರಿಗೆ ಕೆಲ ಪ್ರಶ್ನೆಗಳನ್ನು ಕೇಳಿದ್ದೇನೆ. ಅವರು ರಾಜೀನಾಮೆ ನೀಡುವ ಸಂದರ್ಭದಲ್ಲಿ ಕೆಲವರು ಅಡ್ಡಿ ಪಡಿಸಿದ್ದಾರೆ ಎಂದು ಶಾಸಕರು ಹೇಳಿದ್ದಾರೆ. ಆದರೆ ಈ ಬಗ್ಗೆ ನನಗೆ ಶಾಸಕರು ಮಾಹಿತಿ ನೀಡಿದ್ದರೆ ನಾನು ರಕ್ಷಣೆ ನೀಡುತ್ತಿದೆ. ಈವರೆಗಿನ ಎಲ್ಲಾ ಮಾಹಿತಿಯನ್ನು ನಾನು ಮಾಧ್ಯಮಗಳಿಗೆ ಬಹಿರಂಗ ಪಡಿಸಿದ್ದೇನೆ. ಅಲ್ಲದೇ ಇಂದಿನ ಘಟನೆಯ ಬಗ್ಗೆ ಸಂಪೂರ್ಣ ಚಿತ್ರೀಕರಣ ಮಾಡಿದ್ದು, ನ್ಯಾಯಾಲಯಕ್ಕೆ ಸಲ್ಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ನಾನು ಕರ್ನಾಟಕ ಜನರಿಗೆ ಮತ್ತು ಸಂವಿಧಾನಕ್ಕೆ ಮಾತ್ರ ಅಧೀನವಾಗಿರುತ್ತೇನೆ ಎಂದರು.
ಶುಕ್ರವಾರದಿಂದ ಅಧಿವೇಶನ ನಡೆಯಲಿದೆ ಹಣಕಾಸು ಬಿಲ್ ಪಾಸ್ ಆಗಬೇಕಿದೆ, ಶಾಸಕರಿಗೆ ವಿಪ್ ಜಾರಿಯಾಗಿದೆ ಹೀಗಾಗಿ ಸ್ಪೀಕರ್ ಅವರಿಗೆ ಜವಾಬ್ದಾರಿ ಏನು ಎಂದು ಪ್ರಶ್ನೆ ಕೇಳಿದ್ದಕ್ಕೆ ನಮಗೆ ಯಾವುದೇ ಜವಾಬ್ದಾರಿ ಇಲ್ಲ. ಸರಿಯಾದ ಸಮಯಕ್ಕೆ ಬೆಲ್ ಹೊಡೆಯುವುದು ಅಜೆಂಡಾ ತಯಾರಿಸುವುದು, ಮೃತರಾದ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೋರುವುದು ಅಷ್ಟೇ ಕೆಲಸ ಎಂದು ಉತ್ತರಿಸಿದರು.
ರಾಜೀನಾಮೆ ಕೊಟ್ಟ ಅತೃಪ್ತರು:
ಗೋಕಾಕ್‍ನ ರಮೇಶ್ ಜಾರಕಿಹೊಳಿ, ಹಿರೇಕೆರೂರುನ ಬಿ.ಸಿ. ಪಾಟೀಲ್, ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಅಥಣಿಯ ಮಹೇಶ್ ಕುಮಟಳ್ಳಿ, ಹುಣಸೂರುನ ಎಚ್. ವಿಶ್ವನಾಥ್, ರಾಜರಾಜೇಶ್ವರಿ ನಗರದ ಮುನಿರತ್ನ, ಕೆ.ಆರ್.ಪೇಟೆಯ ನಾರಾಯಣಗೌಡ, ಮಹಾಲಕ್ಷ್ಮಿ ಲೇಔಟ್‍ನ ಗೋಪಾಲಯ್ಯ, ಯಶವಂತಪುರದ ಎಸ್.ಟಿ ಸೋಮಶೇಖರ್, ಕೆ.ಆರ್. ಪುರಂನ ಭೈರತಿ ಬಸವರಾಜ್ ರಾಜೀನಾಮೆ ನೀಡಿದ್ದಾರೆ.
ಬಿಟಿಎಂ ಲೇಔಟ್‍ನ ರಾಮಲಿಂಗಾರೆಡ್ಡಿ, ವಿಜಯನಗರದ ಆನಂದ ಸಿಂಗ್, ಶಿವಾಜಿನಗರದ ರೋಷನ್ ಬೇಗ್ ಸಲ್ಲಿಸಿದ್ದ ರಾಜೀನಾಮೆ ಕ್ರಮಬದ್ಧವಾಗಿದೆ ಎಂದು ಈ ಹಿಂದೆ ಸ್ಪೀಕರ್ ತಿಳಿಸಿದ್ದರು.