ಬೆಂಗಳೂರು: ಮಕರ ಸಂಕ್ರಾಂತಿಗೆ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗುತ್ತಾ ಎಂಬ ಬಿಸಿ ಬಿಸಿ ಚರ್ಚೆಗಳು ರಾಜಕೀಯ ಪಡಸಾಲೆಯಲ್ಲಿ ನಡೆದಿವೆ. ಕಾಂಗ್ರೆಸ್ ಸೆಳೆಯಲು ಪ್ರಯತ್ನಿಸುತ್ತಿರುವ ಬಿಜೆಪಿ ತನ್ನ ಎಲ್ಲ ನಾಯಕರನ್ನು ಹರಿಯಾಣದ ಗುರುಗ್ರಾಮದ ರೆಸಾರ್ಟ್ ನಲ್ಲಿ ಇರಿಸಿದೆ. ಕಾಂಗ್ರೆಸ್‍ನ ಕೆಲ ಅತೃಪ್ತ ಶಾಸಕರು ಮುಂಬೈ ತಲುಪಿದ್ದು, ಬಿಜೆಪಿಗೆ ಬೆಂಬಲ ಘೋಷಿಸಲು ಸಿದ್ಧರಾಗಿದ್ದಾರಂತೆ. ಪಕ್ಷೇತರರು ಇಬ್ಬರು ಸೇರಿದಂತೆ ನಾಲ್ವರು ಕಾಂಗ್ರೆಸ್ ಶಾಸಕರು ಈಗಾಗಲೇ ಕಮಲ ಹಿಡಿಯಲು ತುದಿಗಾಲಲ್ಲಿ ನಿಂತಿದ್ದಾರಂತೆ.
ಒಂದು ವೇಳೆ ಬಿಜೆಪಿ ಸರ್ಕಾರ ರಚಿಸುವ ಮ್ಯಾಜಿಕ್ ನಂಬರ್ ಪಡೆಯುವಲ್ಲಿ ಯಶಸ್ವಿಯಾದ್ರೆ, ಸ್ಪೀಕರ್ ದೋಸ್ತಿ ಸರ್ಕಾರವನ್ನು ಕೆಲ ದಿನಗಳವರೆಗೆ ಉಳಿಸುವ ಸಾಧ್ಯತೆಗಳಿವೆ.
Advertisement
Advertisement
ಸ್ಪೀಕರ್ ಮುಂದಿರುವ ಆಯ್ಕೆ ಏನು?
ಖಾಸಗಿ ಕೆಲಸದಲ್ಲಿ ಸ್ಪೀಕರ್ ಬ್ಯುಸಿ ಆದರೆ ಶಾಸಕರಿಗೆ ತಕ್ಷಣಕ್ಕೆ ಸ್ಪೀಕರ್ ಸಂಪರ್ಕ ಕಷ್ಟವಾಗಬಹುದು. ಶಾಸಕರು ರಾಜೀನಾಮೆ ಸಲ್ಲಿಸಿದ್ರೆ ಕೆಲವು ದಿನಗಳ ಕಾಲ ರಾಜೀನಾಮೆ ಅಂಗೀಕರಿಸದೆ ಸುಮ್ಮನೆ ಇರಬಹುದು. ರಾಜೀನಾಮೆಗೆ ಶಾಸಕರು ಸಮರ್ಪಕ ಕಾರಣ ನೀಡದಿದ್ದರೆ, ರಾಜೀನಾಮೆಯನ್ನ ಪುನರ್ ಪರಿಶೀಲಿಸುವಂತೆ ಶಾಸಕರಿಗೆ ಸೂಚನೆ ನೀಡಬಹುದು. ಇದೇ ವೇಳೆ ಯಾವುದೇ ಒತ್ತಡಕ್ಕೆ ಒಳಗಾಗಿ ರಾಜೀನಾಮೆ ಸಲ್ಲಿಕೆ ಮಾಡಬೇಡಿ ಎಂದು ಶಾಸಕರುಗಳಿಗೆ ತಿಳಿ ಹೇಳಬಹುದು.
Advertisement
ಸ್ವಲ್ಪ ದಿನಗಳ ನಂತರ ಸ್ಪೀಕರ್ ಅನಿವಾರ್ಯವಾಗಿ ರಾಜೀನಾಮೆಯನ್ನ ಅಂಗೀಕರಿಸಬಹುದು. ಇಲ್ಲವೆ ಶಾಸಕರುಗಳು ರಾಜೀನಾಮೆ ಸಲ್ಲಿಸುತ್ತಿದ್ದಂತೆ, ಯಾವುದೇ ವಿವಾದಕ್ಕೆ ಸಿಲುಕುವುದು ಬೇಡ ಎಂದ ತಕ್ಷಣವೇ ರಾಜೀನಾಮೆ ಅಂಗೀಕರಿಸಬಹುದು. ಕಾದು ನೋಡುವ ತಂತ್ರಕ್ಕೆ ಮುಂದಾಗಿ ತಮ್ಮ ವಿವೇಚನೆ ಎಂಬ ಅಸ್ತ್ರ ಬಳಸಿ ರಾಜೀನಾಮೆಯನ್ನ ಅಂಗೀಕರಿಸದೇ ಸತಾಯಿಸಬಹುದು.
Advertisement
ಬಂಡಾಯ ಶಾಸಕರ ಭೇಟಿ ಮುಂದೂಡಲು ಅನಾರೋಗ್ಯದ ನೆಪವೊಡ್ಡಬಹುದು ಅಥವಾ ವಿದೇಶ ಪ್ರವಾಸಕ್ಕೆ ತೆರಳಬಹುದು. ರಮೇಶ್ ಕುಮಾರ್ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಕಡಿಮೆ.
ಬಿಜೆಪಿಯವರು ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಿದ್ರೆ ಕೂಡಲೇ ಸರ್ಕಾರ ಬೀಳಲ್ಲ. ಸ್ಪೀಕರ್ ನಿರ್ಣಯವೇ ಅಂತಿಮವಾಗಲಿದೆ. ಆದರೆ ಸ್ಪೀಕರ್ ರಮೇಶ್ ಕುಮಾರ್ ಸಂವಿಧಾನಿಕ ನಡಾವಳಿಗಳಿಗೆ ಹೆಚ್ಚು ಗೌರವ ಕೊಡುತ್ತಾರೆ. ಹಾಗಾಗಿ ಅವರಿಂದ ದೋಸ್ತಿ ಸರ್ಕಾರ ಸಾಂವಿಧಾನಿಕ ನಡೆಗಳಿಂದ ಹೊರತಾದ ಯಾವ ನಿರೀಕ್ಷೆಯನ್ನು ಇಟ್ಟುಕೊಳ್ಳುವುದು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ.