ಬೆಂಗಳೂರು: ಎಚ್‍ಕೆ ಪಾಟೀಲ್ ಮಾತನಾಡುತ್ತಿದ್ದಾಗ ರಮೇಶ್ ಕುಮಾರ್ ಸ್ಪೀಕರ್ ಕೆಟ್ಟು ಹೋಗಿದೆ ಎಂದು ಹೇಳಿದ ಪ್ರಸಂಗ ಇಂದು ವಿಧಾನಸಭಾ ಕಲಾಪದಲ್ಲಿ ನಡೆಯಿತು.
ವಿಧಾನಸಭೆಯಲ್ಲಿ ಎಚ್‍ಕೆ ಪಟೇಲ್ ಮಾತನಾಡುತ್ತಿದ್ದಾಗ ಸರಿಯಾಗಿ ಕೇಳಿಸುತ್ತಿರಲಿಲ್ಲ. ಈ ಸಂದರ್ಭದಲ್ಲಿ ಸ್ಪೀಕರ್, “ಪಾಟೀಲ್ ಅವರ ಧ್ವನಿ ಕೇಳಿಸುತ್ತಿಲ್ಲ. ಇಲ್ಲಿ ಮೈಕ್ ಕೆಟ್ಟೋದರೆ, ಅಲ್ಲಿ ಸ್ಪೀಕರ್ ಕೆಟ್ಟೋಗಿದೆ ಅಂತಾರೆ. ಹಾಗಾಗಿ ಮೈಕ್ ಚೆಕ್ ಮಾಡಿಕೊಳ್ಳಿ” ಎಂದು ವ್ಯಂಗ್ಯವಾಡಿದರು. ಸ್ಪೀಕರ್ ಅವರ ಈ ಮಾತಿಗೆ ಸದನ ಒಮ್ಮೆ ನಗೆಗಡಲಲ್ಲಿ ತೇಲಾಡಿತು.
ಇದಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ನಿಮಗೆ ಇಲ್ಲಿ ಕೂತವರು ಯಾರಾದ್ರೂ ಸ್ಪೀಕರ್ ಕೆಟ್ಟೋಗಿದೆ ಎಂದು ಹೇಳಬಹುದು. ಆದರೆ ರಾಜ್ಯದ 6 ಕೋಟಿ ಜನ ಮಾತ್ರ ಸ್ಪೀಕರ್ ಸರಿಯಾಗಿದ್ದಾರೆ. ಅವರ ತಲೆ ಸರಿಯಾಗಿದೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಆದರೆ ಇಲ್ಲಿ ಎಲ್ಲರೂ ನಿಮಗೆ ಹಾಗೆ ಅನ್ನಬೇಕು ಎಂದು ಅಪೇಕ್ಷೆ ಮಾಡಿದರೆ ಆಗುವುದಿಲ್ಲ, ನೀವು ಕೂಡ ಅಂತಹ ಅಪೇಕ್ಷೆ ಮಾಡೋದು ಬೇಡ. ಹೀಗಾಗಿ ಆ 6 ಕೋಟಿ ಜನರ ಪರವಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ ಅಂದರು.
ನಾನು ನಿಮ್ಮನ್ನು ಅಭಿನಂದಿಸಲು ಕಾರಣ ಪಕ್ಷಾಂತರದ ಮೂಲಕ ಸಂವಿಧಾನವನ್ನು ಯಾರೂ ತಿರಸ್ಕಾರ, ಅಗೌರವಿಸಿದ್ದಾರೆ, ಧಿಕ್ಕರಿಸಿದ್ದಾರೆಯೋ ಅವರಿಗೆ ನೀವು ತಕ್ಕುದಾದ ಶಾಸ್ತಿ ಮಾಡಿದ್ದೀರಿ. ಅದಕ್ಕೆ ನಿಮಗೆ ಅಭಿನಂದನೆಗಳು ಹೇಳಿ ತಮ್ಮ ಮಾತು ಮುಂದುವರಿಸಿದರು.
ಟ್ರೋಲ್‍ಗೊಳಗಾಗಿದ್ದ `ಸ್ಪೀಕರ್’..!
ಸಮ್ಮಿಶ್ರ ಸರ್ಕಾರ ಪತನಕ್ಕೂ ಮುನ್ನ ನಡೆದಿದ್ದ ರಾಜ್ಯ ರಾಜಕೀಯ ಬೆಳವಣಿಗೆಗಳ ಸಂದರ್ಭದಲ್ಲಿ `ಸ್ಪೀಕರ್’ ಎಂಬ ಪದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್‍ಗೊಳಗಾಗಿತ್ತು.
ವಿಧಾನಸಭೆ ಕಲಾಪ ಆರಂಭವಾದಾಗಿನಿಂದ ‘ಸ್ಪೀಕರ್’ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿತ್ತು. ಅಲ್ಲದೆ ಈ ವಿಚಾರದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ಪರ ವಿರೋಧ ಚರ್ಚೆಗಳು ನಡೆಯುತ್ತಿತ್ತು. ಈ ಮಧ್ಯೆ ಯಕ್ಷಗಾನ ಸಂಘಟಕರೊಬ್ಬರು ನಮ್ಮ ಕಾರ್ಯಕ್ರಮದಲ್ಲಿ ‘ಸ್ಪೀಕರ್’ ಸರಿಯಿದೆ. ಸ್ಪೀಕರ್ ಸರಿ ಇಲ್ಲ ಎಂದು ವದಂತಿ ಹಬ್ಬಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹೇಳಿ ಕಾರ್ಯಕ್ರಮದ ಪರ ಪ್ರಚಾರ ನಡೆಸಿದ್ದರು. ಈ ಪ್ರಚಾರ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.
ಪತ್ರದಲ್ಲಿ ಏನಿತ್ತು?
ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಪೆರ್ಡೂರು ಮೇಳದಿಂದ ‘ಶತಮಾನಂ ಭವತಿ’ ಯಕ್ಷಗಾನ ಪ್ರದರ್ಶನವಿದೆ. ಹಾಗಾಗಿ, ಸ್ಪೀಕರ್ ವಿಚಾರವನ್ನೇ ಇಟ್ಟುಕೊಂಡು ಹಾಸ್ಯ ರೀತಿಯಲ್ಲಿ ಪ್ರಕಟಣೆಯೊಂದನ್ನು ಹೊರಡಿಸಲಾಗಿದೆ. ‘ಸ್ಪೀಕರ್’ ಸರಿ ಇಲ್ಲ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ, ರವೀಂದ್ರ ಕಲಾಕ್ಷೇತ್ರದ ಎಲ್ಲ ಸ್ಪೀಕರ್ ಗಳು ಸರಿ ಇವೆ ಎಂದು ನಾವು ತಿಳಿಸುತ್ತಿದ್ದೇವೆ. ಹಾಗಾಗಿ `ಶತಮಾನಂ ಭವತಿ’ ಯಕ್ಷಗಾನ ಪ್ರದರ್ಶನ ಸುಸೂತ್ರವಾಗಿ ಜರುಗಲಿದ್ದು, ವದಂತಿಗೆ ಕಿವಿಕೊಡದೆ ಬಂದು ಯಕ್ಷಗಾನ ವೀಕ್ಷಿಸಬೇಕು. ಮುಂದೆ ಇಂತಹ ವದಂತಿಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು,’ ಎಂದು ಯಕ್ಷಗಾನ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದರು.