-ರಾಜೀನಾಮೆ ಅಂಗೀಕಾರಕ್ಕಿಂತ ದೊಡ್ಡ ಕೆಲಸ ಇಲ್ಲ
ಬೆಂಗಳೂರು: ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಶಾಸಕರ ರಾಜೀನಾಮೆ ಅಂಗೀಕಾರಕ್ಕಿಂತ ಮತ್ತೊಂದು ದೊಡ್ಡ ಕೆಲಸ ಇಲ್ಲ. ನಿನ್ನೆ ಏನೊ ಕಾರಣ ನೀಡಿದರು. ಇಂದು ರಜೆ, ನಾಳೆ ಮತ್ತೊಂದು ಕಾರಣ ಹೇಳಿದ್ದಾರೆ. ಸ್ಪೀಕರ್ ವಿಳಂಬ ಧೋರಣೆ ಅನುಸರಿಸುವುದು ಸರಿಯಲ್ಲ, ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು ಎಂದು ಮಾಜಿ ಅಡ್ವೋಕೇಟ್ ಜನರಲ್, ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಪ್ರಾಯ ಪಟ್ಟಿದ್ದಾರೆ.
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸ್ಪೀಕರ್ ವಿಳಂಬ ಧೋರಣೆ ಅನುಸರಿಸುವುದು ಸರಿಯಿಲ್ಲ. ಸ್ವತಂತ್ರವಾಗಿ ಕೆಲಸ ನಿರ್ವಹಿಸಬೇಕು. ಶಾಸಕರು ರಾಜೀನಾಮೆ ನೀಡಿದಾಗ ಪರಿಶೀಲಿಸುವುದು ಸ್ಪೀಕರ್ ಕರ್ತವ್ಯ. ಅಲ್ಲದೆ, ರಾಜೀನಾಮೆ ಸಲ್ಲಿಸಿದ ನಂತರ ಪರಿಶೀಲಿಸಬೇಕಾದ ಅಂಶ ಒಂದೇ ಇರುತ್ತದೆ. ಸ್ವಇಚ್ಛೆಯಿಂದ ನೀಡಿದ್ದಾರೋ ಇಲ್ಲವೊ ಎಂಬುದು ಮಾತ್ರ. ಸ್ವಇಚ್ಛೆಯಿಂದ ನೀಡಿದ್ದರೆ, ವಿಳಂಬ ಧೋರಣೆ ಅನುಸರಿಸಬಾರದು ಎಂದು ತಿಳಿಸಿದ್ದಾರೆ.
Advertisement
Advertisement
ಈ ಹಿಂದಿನ ಬಹುತೇಕ ಸ್ಪೀಕರ್‍ಗಳು ತಮ್ಮ ಪಕ್ಷಕ್ಕೆ ಅನುಕೂಲವಾಗುವ ರೀತಿ ನಡೆದುಕೊಂಡಿದ್ದಾರೆ. ಕೋಳಿವಾಡ ಅವರಿಗೆ ಶ್ರೀನಿವಾಸ್ ಪ್ರಸಾದ್ ರಾಜೀನಾಮೆ ವಿಚಾರದಲ್ಲಿ ಸಲಹೆ ಕೊಟ್ಟಿದ್ದೆ. ಆಂಟಿ ಡಿಫೆಕ್ಷನ್ ಲಾವನ್ನು ಸ್ಪೀಕರ್‍ಗೆ ನೀಡಿರುವುದೇ ತಪ್ಪು. ಚುನಾವಣಾ ಆಯೋಗದಂತಹ ಸ್ವತಂತ್ರ ಸಂಸ್ಥೆಗೆ ಈ ಅಧಿಕಾರ ವಹಿಸಬೇಕು. ಕೆಲ ಸ್ಪೀಕರ್‍ಗಳು ಕೊಟ್ಟ ಆಂಟಿ ಡಿಫೆಕ್ಷನ್ ಲಾ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ ಉದಾಹರಣೆಗಳೂ ಇವೆ ಎಂದು ಎಚ್ಚರಿಸಿದ್ದಾರೆ.
Advertisement
ಶಾಸಕರಿಗೆ ವಿಪ್ ನೀಡುವುದರಲ್ಲಿ ಅರ್ಥವಿಲ್ಲ
ಸರ್ಕಾರ ಉಳಿಯಬೇಕೆಂದರೆ ಶಾಸಕರು ರಾಜೀನಾಮೆ ಹಿಂಪಡೆಯಬೇಕು. ಇದೇ ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿದರೆ ಮಾತ್ರ ಸರ್ಕಾರ ಉಳಿಯುತ್ತದೆ. ಇಲ್ಲವೇ ವಿರೋಧ ಪಕ್ಷದ ಕೆಲ ಶಾಸಕರು ರಾಜೀನಾಮೆ ನೀಡಿದರೂ ಸರ್ಕಾರ ಉಳಿಸಿಕೊಳ್ಳಬಹುದು. ರಾಜೀನಾಮೆ ನೀಡಿದ ಶಾಸಕರಿಗೆ ವಿಪ್ ನೀಡಿದರೂ ಒಂದೇ ನೀಡದಿದ್ದರೂ ಒಂದೆ. ವಿಪ್ ಉಲ್ಲಂಘನೆ ಮಾಡಿದರೆ, ಶಾಸಕ ಸ್ಥಾನದಿಂದ ವಜಾ ಮಾಡಬಹುದು. ಶಾಸಕ ಸ್ಥಾನವೇ ಬೇಡ ಎಂದು ರಾಜೀನಾಮೆ ನೀಡಿದಾಗ, ವಿಪ್ ವರ್ಕ್ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರಪತಿ ಆಡಳಿತ ಸಾಧ್ಯವಿಲ್ಲ
ಅಲ್ಲದೆ, ಸರ್ಕಾರದಲ್ಲಿ ಹೀಗೆಲ್ಲಾ ನಡೆಯುತ್ತಿದೆ ಎಂದು ರಾಜ್ಯಪಾಲರು ರಾಷ್ಟ್ರಪತಿ ಆಡಳಿತ ಹೇರುವುದಕ್ಕೂ ಬರುವುದಿಲ್ಲ. ರಾಜ್ಯಪಾಲರು ಆತುರದ ನಿರ್ಧಾರ ಕೈಗೊಂಡರೆ, ತಪ್ಪು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ ಸಿಎಂಗೆ ರಾಜ್ಯಪಾಲರು ಹೇಳಬೇಕು. ಒಂದು ವೇಳೆ ಮುಖ್ಯಮಂತ್ರಿಗಳು ಬಹುಮತ ಸಾಬೀತು ಪಡಿಸುವಲ್ಲಿ ವಿಫಲರಾದರೂ ತಕ್ಷಣಕ್ಕೆ ರಾಷ್ಟ್ರಪತಿ ಆಡಳಿತ ಹೇರುವಂತಿಲ್ಲ. ಬೇರೆ ಪಕ್ಷದ ನಾಯಕರಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಬೇಕು. ಅವರೂ ವಿಫಲವಾದಲ್ಲಿ ಮಾತ್ರ ರಾಷ್ಟ್ರಪತಿ ಆಡಳಿತ ಹೇರಬಹುದು ಎಂದು ಬಿ.ವಿ.ಆಚಾರ್ಯ ಮಾಹಿತಿ ನೀಡಿದ್ದಾರೆ.