ಬೆಂಗಳೂರು: ರಾಜ್ಯದ ಜನತೆ ಬಹಳ ಕುತೂಹಲದಿಂದ ಕಾಯುತ್ತಿದ್ದ ಸಮ್ಮಿಶ್ರ ಸರ್ಕಾರದ ವಿಶ್ವಾಸ ಮತಯಾಚನೆ ಇವತ್ತು ನಡೆಯಲಿದೆ. ಬೆಳಗ್ಗೆ 11 ಗಂಟೆ ಶುರುವಾಗಲಿರುವ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಎಷ್ಟು ಗಂಟೆಗೆ ಮುಗಿಯಬಹುದು ಎನ್ನುವುದು ಗೊತ್ತಿಲ್ಲ. ಆದರೆ ಇಂದು ಸ್ಪೀಕರ್ ಅವರು ಯಾವ ರೀತಿ ಪಾತ್ರ ವಹಿಸುತ್ತಾರೆ ಅನ್ನೋದು ಮಾತ್ರ ಬಹಳ ಕುತೂಹಲಕಾರಿಯಾಗಿದೆ.
ಕಳೆದ ಒಂದು ವಾರಗಳಿಂದ ಸಮ್ಮಿಶ್ರ ಸರ್ಕಾರ ಉಳಿಸಿದ್ದ ಸ್ಪೀಕರ್ ಏನಾದರೂ ಜಾದು ಮಾಡಿ ಉಳಿಸುತ್ತಾರೆ ಅನ್ನೋ ನಂಬಿಕೆ ಸಹ ಸಮ್ಮಿಶ್ರ ಸರ್ಕಾರದ ಶಾಸಕರಿಗೆ ಇದೆ.
Advertisement
Advertisement
ಇಂದು ಏನು ಮಾಡಬಹುದು?
ಮೊದಲು ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಸ್ವವಿವರವಾಗಿ ಸದನದ ಮುಂದೆ ಪ್ರಸ್ತಾಪ ಮಾಡಬಹುದು. ಸ್ಪೀಕರ್ ಅವರ ಅಧಿಕಾರದ ಬಗ್ಗೆ ಸುಪ್ರೀಂ ಕೊಟ್ಟಿರುವ ಆದೇಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಬಹುದು. ನಂತರ ಶಾಸಕರ ರಾಜೀನಾಮೆ ವಿಚಾರವಾಗಿ ಸುಪ್ರೀಂ ಕೋರ್ಟ್ ಕಾಲಮಿತಿ ನಿಗದಿ ಮಾಡದ ಕಾರಣ ಅವರ ರಾಜೀನಾಮೆಗೆ ಸ್ಪಷ್ಟನೆ ಕೊಡಬಹುದು ಅಥವಾ ರಾಜೀನಾಮೆ ಅಂಗೀಕರಿಸಲೂಬಹುದು.
Advertisement
Advertisement
ಅನರ್ಹತೆ ವಿಚಾರವಾಗಿ ಹಳೆಯ ವಿಪ್ ಉಲ್ಲಂಘನೆ ಮಾಡಿದ್ದಕ್ಕೆ ಇಬ್ಬರು ಶಾಸಕರನ್ನು ಅನರ್ಹತೆ ಮಾಡಬಹುದು. ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ನೀಡಿ ವಾಪಸ್ ತೆಗೆದುಕೊಂಡಿರುವ ಪಕ್ಷೇತರರಿಗೆ ಪ್ರತ್ಯೇಕ ಆಸನ ನೀಡುವ ಬಗ್ಗೆ ಚರ್ಚೆ ನಡೆಸಬಹುದು. ಈ ಚರ್ಚೆಯ ನಂತರ ವಿಶ್ವಾಸ ಮತಯಾಚನೆಗೆ ಚಾಲನೆ ನೀಡಬಹುದು.
ವಿಶ್ವಾಸ ಮತ ಯಾಚನೆಯ ಮೇಲೆ ಶಾಸಕರು ಆಡುವ ಮಾತುಗಳಿಗೆ ಅವಕಾಶ ನೀಡಬಹುದು. ಒಂದು ವೇಳೆ ಸಾಕಷ್ಟು ಶಾಸಕರು ಭಾಷಣಕ್ಕೆ ಮನವಿ ಮಾಡಿದರೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಎರಡು-ಮೂರು ದಿನಗಳ ಕಾಲ ನಡೆಯಬಹುದು. ವಿಶ್ವಾಸ ಮತಯಾಚನೆಯ ವೇಳೆ ಸದಸ್ಯರ ಭಾಷಣ ಒಂದೇ ದಿನಕ್ಕೆ ಅಂತ್ಯವಾದರೆ ಇಂದೇ ವಿಶ್ವಾಸ ಮತಯಾಚನೆಗೆ ಅವಕಾಶ ಮಾಡಿಕೊಡಬಹುದು.
ಮೊದಲು ವಿಶ್ವಾಸದ ಪರವಾಗಿ ಇರುವ ಸದಸ್ಯರಿಗೆ ಕೈ ಎತ್ತುವಂತೆ ಸೂಚನೆ ಕೊಡಬಹುದು. ಕೈ ಎತ್ತಿದ ಸದಸ್ಯರ ಲೆಕ್ಕ ಮಾಡಿಕೊಂಡು ಅವಿಶ್ವಾಸ ಇರುವ ಸದಸ್ಯರಿಗೆ ಕೈ ಎತ್ತುವಂತೆ ಸೂಚನೆ ಕೊಡಬಹುದು. ಅವಿಶ್ವಾಸ ಇರುವ ಸದಸ್ಯರು ಎತ್ತಿದ್ದ ಕೈಗಳನ್ನು ಎಣಿಸಿಕೊಂಡ ನಂತರ ಸ್ಪೀಕರ್ ವಿಶ್ವಾಸ ಮತಕ್ಕೆ ಎಷ್ಟು ಮತಗಳು ಬಂದಿವೆ, ಎಷ್ಟು ವಿರುದ್ಧವಾಗಿ ಬಂದಿವೆ ಎಂದು ಘೋಷಣೆ ಮಾಡಿ ಫಲಿತಾಂಶ ಪ್ರಕಟಿಸುತ್ತಾರೆ.