ಮಲ್ಲೇಶ್ವರಂ ಮನೆ ತಲುಪಿದ ಸ್ಪಂದನಾ ಮೃತದೇಹ – ಶಿವಣ್ಣ ದಂಪತಿ ಆಗಮನ, ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Public TV
1 Min Read
Spandana 3

ಬೆಂಗಳೂರು: ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಮೃತದೇಹ ತಡರಾತ್ರಿ 1 ಗಂಟೆ ವೇಳೆಗೆ ಮಲ್ಲೇಶ್ವರಂನ ತವರು ಮನೆ ತಲುಪಿದೆ. ಸಾವಿನಿಂದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಗಣ್ಯರು, ಆಪ್ತರು, ಸ್ನೇಹಿತರು ಹಾಗೂ ಸಿನಿ ತಾರೆಯರು ಕಂಬನಿ ಮಿಡಿದಿದ್ದಾರೆ. ಮೃತದೇಹ ನೋಡುತ್ತಿದ್ದಂತೆಯೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತು.

Shivanna

ನಟ ಶಿವರಾಜ್‌ ಕುಮಾರ್‌ ಪತ್ನಿ ಗೀತಾ ಶಿವರಾಜ್‌ ಕುಮಾರ್‌ ಹಾಗೂ ಸ್ಪಂದನಾ ಸ್ನೇಹಿತೆ ನಟಿ ಅನು ಪ್ರಭಾಕರ್‌ ಸೇರಿದಂತೆ ಹಲವು ಗಣ್ಯಮಾನ್ಯರು ಮಲ್ಲೇಶ್ವರಂನ ಮನೆಗೆ ಆಗಮಿಸಿದ್ದಾರೆ. ನಟ ವಿಜಯರಾಘವೇಂದ್ರ, ಶ್ರೀಮುರಳಿ, ಚಿಕ್ಕಪ್ಪ ಬಿ.ಕೆ ಹರಿಪ್ರಸಾದ್‌, ಶಾಸಕ ಮುನಿರತ್ನ, ಮಾವ ಚಿನ್ನೇಗೌಡ ಹಲವು ಪ್ರಮುಖರು ಸ್ಥಳದಲ್ಲಿದ್ದಾರೆ. ಅಂಬುಲೆನ್ಸ್‌ ಮಲ್ಲೇಶ್ವರಂನ ತವರು ಮನೆ ತಲುಪುತ್ತಿದ್ದಂತೆ ಮೃತದೇಹ ನೋಡಲು ನೆರೆದಿದ್ದ ಜನ ಮುಗಿಬಿದ್ದರು. ಅಂಬುಲೆನ್ಸ್‌ ಬಳಿ ತಳ್ಳಾಟ, ನೂಕಾಟ ನಡೆಯಿತು.

ಮಲ್ಲೇಶ್ವರಂನ ಮನೆಗೆ ಪಾರ್ಥಿವ ಶರೀರ ತರಲಾಗಿದ್ದು ಪಾರ್ಥಿವ ಶರೀರ ಪೂಜೆಗೆ ಸಿದ್ಧತೆ ನಡೆಯುತ್ತಿದೆ, ಸ್ಪಂದನಾ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಸ್ನೇಹಿತರು, ಆಪ್ತರು ಈಗಾಗಲೇ ಮಲ್ಲೇಶ್ವರಂನ ಮನೆಯ ಮುಂದೆ ಜಮಾಯಿಸಿದ್ದಾರೆ. ಸ್ಪಂದನಾ ಸಹೋದರ ರಕ್ಷಿತ್ ಶಿವರಾಂ, ಮಾವ ಚಿನ್ನೇಗೌಡ ನೇತೃತ್ವದಲ್ಲಿ ಅಂತಿಮ ದರ್ಶನಕ್ಕೆ ತಯಾರಿ ಮಾಡಿಕೊಳ್ಳಲಾಗಿದೆ. ವಿಜಯ ರಾಘವೇಂದ್ರ ಕುಟುಂಬ ಕೂಡ ಸ್ಪಂದನಾ ಅವರ ತವರು ಮನೆಗೆ ಆಗಮಿಸಿದೆ.

ಬುಧವಾರ (ಆ.9) ಮಧ್ಯಾಹ್ನ 1 ಗಂಟೆಯವರೆಗೂ ಸ್ಪಂದನಾ ಅವರ ಪಾರ್ಥಿವ ಶರೀರವನ್ನ ಸಾರ್ವಜನಿಕರ ದರ್ಶನಕ್ಕೆ ಇಟ್ಟು, ನಂತರ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಈಡಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನಗಳು ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Web Stories

Share This Article