ಮಸ್ಕ್‌ ಜೊತೆ ಒಪ್ಪಂದ – ಫಸ್ಟ್‌ ಟೈಂ ಸ್ಪೇಸ್‌ ಎಕ್ಸ್‌ ರಾಕೆಟ್‌ನಲ್ಲಿ ಹಾರಲಿದೆ ಇಸ್ರೋ ಉಪಗ್ರಹ

Public TV
2 Min Read
Narendra Modi Elon Musk

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇದೇ ಮೊದಲ ಬಾರಿಗೆ ವಿಶ್ವದ ಶ್ರೀಮಂತ ಉದ್ಯಮಿ ಎಲೋನ್‌ ಮಸ್ಕ್‌ (Elon Musk) ಮಾಲೀಕತ್ವದ ಸ್ಪೇಸ್‌ಎಕ್ಸ್‌ (Space X) ಕಂಪನಿಯ ರಾಕೆಟ್‌ ಬಳಸಿ ಉಪಗ್ರಹವನ್ನು ಕಕ್ಷೆಗೆ ಸೇರಿಸಲಿದೆ.

ಇಸ್ರೋದ ಸಂವಹನ ಉಪಗ್ರಹವನ್ನು ಸ್ಪೇಸ್‌ಎಕ್ಸ್‌ನ ಫಾಲ್ಕನ್ 9 ರಾಕೆಟ್ (Space X Falcon 9 Rocket) ನಭಕ್ಕೆ ಕೊಂಡೊಯ್ಯಲಿದೆ. ಅಮೆರಿಕದ ಕೇಪ್ ಕೆನವೆರಲ್‌ ಉಡಾವಣಾ ಕೇಂದ್ರದಿಂದ ಉಡಾವಣೆಯಾಗಲಿದ್ದು, ಈ ಉಡಾವಣೆಗೆ ಅಂದಾಜು 60-70 ಮಿಲಿಯನ್ ಡಾಲರ್‌ ವೆಚ್ಚವಾಗಲಿದೆ.

ಇಸ್ರೋ ಮತ್ತು ಸ್ಪೇಸ್‌ಎಕ್ಸ್ ನಡುವಿನ ಅನೇಕ ವಾಣಿಜ್ಯ ಸಹಯೋಗಗಳಲ್ಲಿ ಇದು ಮೊದಲನೆಯದು ಮತ್ತು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್‌ ಟ್ರಂಪ್‌ (Donald Trump) ಅವಧಿಯಲ್ಲಿ ಅವರ ಸ್ನೇಹಿತ ಮಸ್ಕ್‌ ಜೊತೆಗಿನ ಮೊದಲ ಒಪ್ಪಂದ ಎನ್ನುವುದು ವಿಶೇಷ.  ಇದನ್ನೂ ಓದಿ: ಮಸ್ಕ್‌ನ ಸ್ಟಾರ್‌ಲಿಂಕ್‌ಗೆ ಅನುಮತಿ ನೀಡುವ ಮುನ್ನ ನಿರ್ಧಾರ ಪರಿಶೀಲಿಸಿ: ಕೇಂದ್ರಕ್ಕೆ ಜಿಯೋ ಪತ್ರ

spacex falcon musk e1612091281572

GSAT-N2 ಅಥವಾ GSAT-20 ಹೆಸರಿನ ಉಪಗ್ರಹವು ಭಾರತದಲ್ಲಿ ವಿಮಾನದಲ್ಲಿ ಇಂಟರ್ನೆಟ್ ಸೇವೆಗಳನ್ನು ಒದಗಿಸಲಿದೆ. ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್‌ಐಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಾಧಾಕೃಷ್ಣನ್ ದುರೈರಾಜ್ ಅವರು ಸ್ಪೇಸ್‌ಎಕ್ಸ್‌ನೊಂದಿಗೆ ಉಡಾವಣೆ ಮಾಡಲು ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.

ಸದ್ಯ ಈಗ ಭಾರತದಲ್ಲಿ ವಿಮಾನದ ಒಳಗಡೆ ಇಂಟರ್ನೆಟ್‌ ಸೇವೆಗೆ ನಿಷೇಧವಿದೆ. ಈ ಸೇವೆಯನ್ನು ಒದಗಿಸುವ ವಿಮಾನಯಾನ ಸಂಸ್ಥೆಗಳು ಭಾರತೀಯ ವಾಯುಪ್ರದೇಶದ ಮೇಲೆ ಹಾರುವಾಗ ಅದನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ.

NavIC isro

ಭಾರತ ಸರ್ಕಾರವು ನವೆಂಬರ್ 4 ರಂದು ನಿಯಮಗಳನ್ನು ತಿದ್ದುಪಡಿ ಮಾಡಿದೆ. ಭಾರತೀಯ ವಾಯುಪ್ರದೇಶ ಒಳಗಡೆ ವಿಮಾನದಲ್ಲಿ 3,000 ಮೀಟರ್ ಎತ್ತರವನ್ನು ತಲುಪಿದ ನಂತರ ವಿಮಾನದಲ್ಲಿ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸಲು ಅನುಮತಿಸಿದಾಗ ಮಾತ್ರ ವಿಮಾನದಲ್ಲಿನ ಪ್ರಯಾಣಿಕರು ವೈಫೈ ಮೂಲಕ ಇಂಟರ್ನೆಟ್ ಸೇವೆಗಳನ್ನು ಬಳಸಲು ಸಾಧ್ಯವಾಗಲಿದೆ.

ಸ್ಪೇಸ್‌ ಎಕ್ಸ್‌ನಲ್ಲಿ ಯಾಕೆ?
ಭಾರತದ ಅತಿದೊಡ್ಡ ಉಡಾವಣಾ ನೌಕೆ ಎಂದೇ ಖ್ಯಾತಿ ಪಡೆದಿರುವ ʼಬಾಹುಬಲಿ’ ಜಿಎಸ್‌ಎಲ್‌ವಿ ಮಾರ್ಕ್‌-3 ಗರಿಷ್ಠ 4,100 ಕೆ.ಜಿ. ತೂಕದ ಉಪಗ್ರಹವನ್ನು ಮಾತ್ರ ಹಾರಿಸುವ ಸಾಮರ್ಥ್ಯ ಹೊಂದಿದೆ. ಸ್ಯಾಟ್‌-20 ಉಪಗ್ರಹವು ಬರೋಬ್ಬರಿ 4,700 ಕೆ.ಜಿ. ತೂಕವಿರುವುದರಿಂದ ಇಸ್ರೋ ಫಾಲ್ಕನ್ 9 ರಾಕೆಟ್‌ ಬಳಸುತ್ತಿದೆ. ಫಾಲ್ಕನ್‌ 9 ಗರಿಷ್ಠ 22,800 ಕೆಜಿ ತೂಕದ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಸಾಮರ್ಥ್ಯ ಹೊಂದಿದೆ.

 

Share This Article