ಚಿಕ್ಕಬಳ್ಳಾಪುರ: ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ಎಸ್‍ಪಿ ರಾಧಿಕಾ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಘಟನೆ ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿ ಬಳಿ ನಡೆದಿದೆ.
ಕಾರು ಹಾಗೂ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಚಾಲಕ ಬಸ್ಸನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.
ಆಗಿದ್ದೇನು?:
ಈ ಹಿಂದೆ ಮಂಡ್ಯ ಎಸ್‍ಪಿ ಆಗಿದ್ದ ರಾಧಿಕಾ ಸದ್ಯ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಸ್‍ಪಿ ರಾಧಿಕಾ ಕುಟುಂಬಸ್ಥರ ಸಮೇತ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ ದೇವಾಲಯಕ್ಕೆ ಆಗಮಿಸಿ, ದೇವಾಲಯದಲ್ಲಿ ನಾಗಪ್ರತಿಷ್ಟಪನಾ ಪೂಜೆ ಸಲ್ಲಿಸಿ ಬೆಂಗಳೂರಿಗೆ ಖಾಸಗಿ ಇನ್ನೋವಾ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಲ್ಲಿನಾಯಕನಹಳ್ಳಿ ಬೆಂಗಳೂರಿನಿಂದ ಪೆನುಗೊಂಡ ಕಡೆಗೆ ತೆರಳುತ್ತಿದ್ದ ಭಾರತಿ ಹೆಸರಿನ ಖಾಸಗಿ ಬಸ್ ಡಿಕ್ಕಿ ಹೊಡೆದಿದ್ದು, ಇನ್ನೋವಾ ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ರಾಧಿಕಾ ಹಾಗೂ ಕುಟುಂಬಸ್ಥರು ಸೇರಿದಂತೆ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಪಘಾತದಲ್ಲಿ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕ್ಕ ಮಕ್ಕಳು ಅಪಘಾತದಿಂದ ಭಯ ಬಿದ್ದಿದ್ದರು. ಹೀಗಾಗಿ ಬೇರೊಂದು ಕಾರು ವ್ಯವಸ್ಥೆ ಮಾಡಿಕೊಂಡು ದೊಡ್ಡಬಳ್ಳಾಪುರ ನಗರದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.
ಎಸ್‍ಪಿ ರಾಧಿಕಾ ಅವರ ಜೊತೆ ಪತಿ, ಮಗಳು ಸೇರಿದಂತೆ ಅವರ ತಾಯಿ ಹಾಗೂ ಮತ್ತೊಬ್ಬ ಮಹಿಳೆ ಇದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇತ್ತ ಅಪಘಾತ ಸಂಭವಿಸುತ್ತಿದ್ದಂತೆ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ್ದ ತೊಂಡೆಬಾವಿ ಹೊರಠಾಣಾ ಪೊಲೀಸರು ಬಸ್ಸನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv