– ಮಧುಕರ್ ಶೆಟ್ಟಿ ನೆನೆದು ಭಾವುಕರಾದ ಗ್ರಾಮಸ್ಥರು
ಚಿಕ್ಕಮಗಳೂರು: ತಾಲೂಕಿನ ಆಲ್ದೂರು ಸಮೀಪದ ಗುಪ್ತಶೆಟ್ಟಿಹಳ್ಳಿಗೆ ದಿವಂಗತ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ಪತ್ನಿ ಸುವರ್ಣ ಭೇಟಿ ನೀಡಿ ಗ್ರಾಮಸ್ಥರ ಯೋಗಕ್ಷೇಮ ವಿಚಾರಿಸಿ, ಮಧುಕರ್ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಪತಿ ನೆನೆದು ಕಣ್ಣೀರು ಹಾಕಿದರು.
ಸರಿಯಾದ ರಸ್ತೆಯೂ ಇಲ್ಲದ ಕುಗ್ರಾಮಕ್ಕೆ ಬಂದು ಹಳ್ಳಿಗರೊಂದಿಗೆ ಬೆರತು ಮಾತನಾಡಿದ್ದರು. ಹೀಗಾಗಿ ನಮಗೆ ಮಧುಕರ್ ಶೆಟ್ಟಿಯೇ ದೇವರು ಎಂದು ಗ್ರಾಮಸ್ಥರು ಸುವರ್ಣ ಅವರ ಬಳಿ ಹೇಳಿಕೊಂಡರು. ಇದನ್ನೂ ಓದಿ: ಖಾಕಿಯೊಳಗಿನ ಮಿನುಗುತಾರೆ ನೆನಪು ಮಾತ್ರ- ಮಧುಕರ್ ದಕ್ಷತೆ ಹಾದಿಯ ಬಗ್ಗೆ ಓದಿ
ಅಮೆರಿಕದಲ್ಲಿ ಪ್ರೊಫೆಸರ್ ಆಗಿರುವ ಮಧುಕರ್ ಶೆಟ್ಟಿ ಪತ್ನಿ ಸುವರ್ಣ ಅವರು ಕುಗ್ರಾಮಕ್ಕೆ ಭೇಟಿ ನೀಡಿ ಜನರೊಂದಿಗೆ ಮಾತುಕತೆ ನಡೆಸಿ, ಅವರ ಕಷ್ಟ-ಸುಖಗಳನ್ನು ಆಲಿಸಿದರು. ಇದೇ ಸಂದರ್ಭದಲ್ಲಿ ಆಲ್ದೂರು ಪಿಎಸ್‍ಐ ಸುನೀತಾ ಕೂಡ ಮಧುಕರ್ ಶೆಟ್ಟಿಯವರನ್ನು ನೆನೆದು ಕಣ್ಣೀರು ಹಾಕಿದರು. ಮಧುಕರ್ ಶೆಟ್ಟಿ ಪತ್ನಿ ಸುವರ್ಣ, ಮಗಳು ಸೌಮ್ಯ ಹಾಗೂ ಸಹೋದರ ಭೇಟಿ ನೀಡಿದ್ದರು. ದಿಢೀರ್ ಹಳ್ಳಿಗೆ ಭೇಟಿ ನೀಡಿ ಬಡಜನರ ಕಷ್ಟ ಆಲಿಸಿದ ಸುವರ್ಣ ಅವರನ್ನು ಕಂಡು ಗ್ರಾಮಸ್ಥರು ಸಂತಸಗೊಂಡರು. ಇದನ್ನೂ ಓದಿ: ಬೊಂಬೆನಾಡಿನಿಂದ ವೃತ್ತಿ ಆರಂಭಿಸಿದ್ದರು ಮಧುಕರ್ ಶೆಟ್ಟಿ
ಗ್ರಾಮದಲ್ಲಿರುವ 32 ಕುಟುಂಬಗಳು 2006ರಲ್ಲಿ ಸಾರಗೋಡು ಮೀಸಲು ಅರಣ್ಯದಿಂದ ಸ್ಥಳಾಂತರಗೊಂಡವರು. ನಮಗೆ ಇಲ್ಲಿ ಜಾಗ ಕೊಡಿಸಿದ್ದೇ ಮಧುಕರ್ ಶೆಟ್ಟಿ. ಹಾಗಾಗಿ ಅಂದು ಚಿಕ್ಕಮಗಳೂರಲ್ಲಿ ಎಸ್ಪಿಯಾಗಿದ್ದ ಮಧುಕರ್ ಶೆಟ್ಟಿ ಹಾಗೂ ಡಿಸಿ ಹರ್ಷಗುಪ್ತ ಹೆಸರನ್ನು ಸೇರಿಸಿ ಗ್ರಾಮಕ್ಕೆ ಗುಪ್ತಶೆಟ್ಟಿಹಳ್ಳಿ ಎಂದು ನಾಮಕರಣ ಮಾಡಿದೆವು. ಅಂದಿನಿಂದ ಇದು ಗುಪ್ತಶೆಟ್ಟಿಹಳ್ಳಿಯಾಗಿದೆ. ಮಧುಕರ್ ಶೆಟ್ಟಿ ವರ್ಗಾವಣೆಯಾದ ನಂತರ ಈ ಊರು ಸರ್ಕಾರದಿಂದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಬದುಕಿರುವಾಗ್ಲೇ ಸತ್ತಿರುವ ಅಧಿಕಾರಿಗಳ ಮಧ್ಯೆ ಸತ್ತ ಮೇಲೂ ಬದುಕಿರೋರಲ್ಲಿ ಮಧುಕರ್ ಶೆಟ್ಟಿ ಸಹ ಒಬ್ಬರು. ಈ ಕುಗ್ರಾಮದ ಮನೆ-ಮನದಲ್ಲಿ ಮಧುಕರ್ ಶೆಟ್ಟಿ ಹೆಸರು ಎಂದೆಂದಿಗೂ ಅಜರಾಮರ. ಮಧುಕರ್ ಶೆಟ್ಟಿ ಸಾವನ್ನಪ್ಪಿದ್ದ ದಿನ ಊರಿನ ಜನರೆಲ್ಲ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು ಎಂದು ಗ್ರಾಮಸ್ಥರು ಭಾವನೆಗಳನ್ನು ಹಂಚಿಕೊಂಡರು.