ಲಕ್ನೋ: ಬುಧವಾರ ಸಮಾಜವಾದಿ ಪಕ್ಷದ ನಾಯಕ ಫಿರೋಜ್ ಖಾನ್ ಮಹಾತ್ಮ ಗಾಂಧೀಜಿಯನ್ನು ನೆನೆದು ಅವರ ಪುತ್ಥಳಿ ಮುಂದೆ ಗಳಗಳನೆ ಅತ್ತ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದ್ಭುತ ನಟನೆ ಅವರಿಗೆ ಆಸ್ಕರ್ ಕೊಡಿ ಎಂದು ನೆಟ್ಟಿಗರು ಫಿರೋಜ್ ಖಾನ್ ಕಾಲೆಳೆದಿದ್ದಾರೆ.
ಉತ್ತರಪ್ರದೇಶದ ಸಂಬಲ್ ನಗರದ ಫವಾರ ಚೌಕದಲ್ಲಿರುವ ಗಾಂಧೀಜಿ ಪ್ರತಿಮೆ ಬಳಿ ಫಿರೋಜ್ ಖಾನ್ ಕಣ್ಣೀರು ಹಾಕಿದ್ದಾರೆ. ಇತರೆ ಎಸ್‍ಪಿ ನಾಯಕರು ಅಲ್ಲಿ ಕ್ಯಾಮೆರಾ ಕಂಡ ಕೂಡಲೇ ಅಳಲು ಆರಂಭಿಸಿ ನಾಯಕನಿಗೆ ಸಾಥ್ ಕೊಟ್ಟರು. ಮಹಾತ್ಮ ಗಾಂಧೀಜಿಯ ಪುತ್ಥಳಿಗೆ ಪುಷ್ಪಾರ್ಚನೆ ಮಾಡಲು ಫಿರೋಜ್ ಖಾನ್ ಅವರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಫಿರೋಜ್ ಖಾನ್ ನಮ್ಮ ಸಮಾಜದ ವಾಸ್ತವ ಸ್ಥಿತಿಯನ್ನು ಗಾಂಧೀಜಿ ಪುತ್ಥಳಿ ಮುಂದೆ ಹೇಳುತ್ತ ಗಳಗಳನೆ ಕಣ್ಣೀರು ಹಾಕಿದ್ದರು. ಫಿರೋಜ್ ಖಾನ್ ಕಣ್ಣೀರು ಹಾಕುತ್ತಿದ್ದಂತೆ ಅವರ ಜೊತೆಗಿದ್ದ ಬೆಂಬಲಿಗರು ಕೂಡ ಅತ್ತು, ಗೋಗರಿದಿದ್ದಾರೆ.
ಈ ದೇಶಕ್ಕೆ ನೀವು ಸ್ವಾತಂತ್ರ ತಂದುಕೊಟ್ಟು ನಮ್ಮನ್ನೆಲ್ಲ ಬಿಟ್ಟು ಬಾಪು ನಿವೇಕೆ ದೂರ ಹೋದಿರಿ? ನಮ್ಮನ್ನೆಲ್ಲಾ ಅನಾಥರಾಗಿ ಬಿಟ್ಟು ಹೋದಿರಿ. ನಿಮ್ಮ ಎಲ್ಲ ಆದರ್ಶಗಳು ಸಮಯ ಕಳೆದಂತೆ ಮರೆಯಾಗುತ್ತಿದೆ. ಇದನ್ನೆಲ್ಲ ನೋಡಲು ನಾವು ಇನ್ನೂ ಇರಬೇಕಾ ಎಂದು ಹೇಳಿದ ಫಿರೋಜ್ ಖಾನ್ ಜೋರಾಗಿ ಅಳಲು ಆರಂಭಿಸಿದರು. ಈ ವೇಳೆ ಅವರನ್ನು ನೋಡಿದ ಬೆಂಬಲಿಗರು ಕೂಡ ಬಿಕ್ಕಿ ಬಿಕ್ಕಿ ಅತ್ತರು.
https://twitter.com/AsYouNtWish/status/1179437716221509632
ಈ ದೃಶ್ಯವನ್ನು ಸ್ಥಳೀಯರು ವಿಡಿಯೋ ಮಾಡಿದ್ದು, ವಿಡಿಯೋ ನೋಡಿದ ನೆಟ್ಟಿಗರು ಫಿರೋಜ್ ಖಾನ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ. ಎಂಥ ಅಭಿನಯ, ಇವರಿಗೆ ಆಸ್ಕರ್ ಪ್ರಶಸ್ತಿ ಕೊಡಿ ಎಂದು ಕಮೆಂಟ್ ಮಾಡಿ ಟೀಕಿಸುತ್ತಿದ್ದಾರೆ.
ಈ ಬಾರಿಯ ಆಸ್ಕರ್ ಪ್ರಶಸ್ತಿ ಫಿರೋಜ್ ಖಾನ್ ಅವರ ಕೈಸೇರುವುದರಲ್ಲಿ ಅನುಮಾನವೇ ಇಲ್ಲ. ಯಾವ ಸೀರಿಯಲ್ ನೋಡಿ ಬಂದು ಫಿರೋಜ್ ಖಾನ್ ಕಣ್ಣೀರು ಹಾಕಿದರೋ ಗೊತ್ತಿಲ್ಲ ಎಂದು ನೆಟ್ಟಿಗರು ಟೀಕಿಸಿದ್ದಾರೆ. ಕೆಲವರು ಈ ಬಾರಿ ಬಿಗ್ ಬಾಸ್ ಮನೆಗೆ ಹೋಗೋ ಪ್ಲಾನ್ ಇದ್ರೆ ಹೇಳಿ, ಸುಮ್ಮನೆ ನಾಟಕ ಯಾಕೆ ಮಾಡುತ್ತೀರಾ? ಎಂದು ಕಿಡಿಕಾರಿದ್ದರೆ, ಇನ್ನೂ ಕೆಲವರು ಕೊನೆಗೂ ನಮ್ಮ ದೇಶಕ್ಕೆ ಒಂದೊಳ್ಳೆ ಪ್ರತಿಭಾವಂತ ನಟ ಸಿಕ್ಕಿದನಲ್ಲ ಅಂತ ಖುಷಿಯಾಯ್ತು ಎಂದೆಲ್ಲ ಸಖತ್ ಟ್ರೋಲ್ ಮಾಡಿ ಗೇಲಿ ಮಾಡುತ್ತಿದ್ದಾರೆ.
https://twitter.com/Manish23mishra/status/1179392639034150913