ಐದೇ ತಿಂಗಳಲ್ಲಿ ಮುರಿದು ಬಿತ್ತು ಎಸ್‍ಪಿ, ಬಿಎಸ್‍ಪಿ ಮೈತ್ರಿ

Public TV
2 Min Read
MAYAWATI AKHILESH

ಲಕ್ನೋ: ಪ್ರಧಾನಿ ನರೇಂದ್ರ ಮೋದಿಯನ್ನು ಸೋಲಿಸಲು ಲೋಕಸಭಾ ಚುನಾವಣೆಯಲ್ಲಿ ಒಂದಾಗಿದ್ದ ಬಿಎಸ್‍ಪಿ, ಎಸ್‍ಪಿ ಮೈತ್ರಿಕೂಟ ಫಲಿತಾಂಶ ಬಂದ ಬಳಿಕ ಮುರಿದು ಬಿದ್ದಿದ್ದು, ಒಂಟಿಯಾಗಿಯೇ ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಉಪಚುನಾವಣೆಯನ್ನು ಎದುರಿಸಲು ನಿರ್ಧರಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು ನಾವು ಶಾಶ್ವತವಾಗಿ ಮೈತ್ರಿಯನ್ನು ಮುರಿಯುತ್ತಿಲ್ಲ. ಭವಿಷ್ಯದಲ್ಲಿ ಎಸ್‍ಪಿ ರಾಜಕೀಯವಾಗಿ ಯಶಸ್ವಿಯಾದರೆ ನಾವು ಮತ್ತೆ ಒಂದಾಗಿ ಕೆಲಸ ಮಾಡುತ್ತೇವೆ. ಒಂದು ವೇಳೆ ಎಸ್‍ಪಿ ರಾಜಕೀಯವಾಗಿ ಯಶಸ್ಸು ಗಳಿಸಲು ವಿಫಲವಾದರೆ, ನಾವು ಬೇರೆಯಾಗುವುದೇ ಒಳ್ಳೆಯದು. ಹೀಗಾಗಿ ನಾವು ಉಪಚುನಾವಣೆಯನ್ನು ಒಂಟಿಯಾಗಿಯೇ ಎದುರಿಸಲು ನಿರ್ಧರಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

Mayawati Akhilesh

ಮಾಯಾವತಿಯ ಹೇಳಿಕೆಯ ಬೆನ್ನಲ್ಲೇ ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿ, ನಾವು ಸಹ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುತ್ತೇವೆ. 11 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ ಎಂದು ಹೇಳಿದ್ದಾರೆ.

ಪಕ್ಷದ ಸಭೆಯಲ್ಲಿ ಮಾತನಾಡಿದ ಮಾಯಾವತಿ ಅವರು ಮುಂಬರುವ ಉಪಚುನಾವಣೆಗೆ ಮತ್ತು 2022ರ ವಿಧಾನಸಭಾ ಚುನಾವಣೆಯಲ್ಲಿ 403 ಕ್ಷೇತ್ರಗಳಲ್ಲಿಯೂ ಸ್ಫರ್ಧಿಸಲು ತಯಾರಾಗಿರಿ ಎಂದು ಬಿಎಸ್‍ಪಿ ನಾಯಕರಿಗೆ ತಿಳಿಸಿದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶ ನನಗೆ ತೃಪ್ತಿ ನೀಡಿಲ್ಲ. ಎಸ್‍ಪಿ ಸರಿಯಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿಲ್ಲ. ಅಖಿಲೇಶ್ ಯಾದವ್‍ರೊಂದಿಗಿನ ಮೈತ್ರಿ ನಮಗೂ ಮತ್ತು ನಮ್ಮ ಪಕ್ಷದ ಭವಿಷ್ಯಕ್ಕೂ ಮುಳ್ಳಾಗಬಹುದು ಎಂದು ಮಾಯಾವತಿ ಹೇಳಿದ್ದಾರೆ ಎಂದು ವರದಿಯಾಗಿದೆ.

Mayawati 3

ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಕುರಿತು ಮಾತನಾಡಿ, ಎಸ್‍ಪಿ- ಬಿಎಸ್‍ಪಿ ಮೈತ್ರಿ ಮಾಡಿಕೊಂಡ ಬಳಿಕ ಅಖಿಲೇಶ್ ಯಾದವ್ ಹಾಗೂ ಅವರ ಪತ್ನಿ ಡಿಂಪಲ್ ಯಾದವ್ ನನಗೆ ಬಹಳ ಗೌರವ ನೀಡಿದ್ದಾರೆ. ದೇಶಕ್ಕಾಗಿ ನಾನು ನಮ್ಮ ಮಧ್ಯೆಯಿರುವ ಎಲ್ಲಾ ಭಿನ್ನಾಭಿಪ್ರಾಯವನ್ನು ಮರೆಯುತ್ತೇನೆ. ಅವರು ನನಗೆ ನೀಡಿದ ಗೌರವಕ್ಕೆ ನಾನು ಬದ್ಧಳಾಗಿರುತ್ತೇನೆ. ನಮ್ಮ ಸಂಬಂಧ ಕೇವಲ ರಾಜಕೀಯಕ್ಕೇ ಮಾತ್ರ ಸೀಮಿತವಲ್ಲ, ನಾವು ನಮ್ಮ ಸ್ನೇಹವನ್ನು ಎಂದಿಗೂ ಮುಂದವರಿಸುತ್ತೇವೆ ಎಂದು ತಿಳಿಸಿದರು.

ಸಮಾಜವಾದಿ ಪಕ್ಷದ ಅಂತರಿಕ ಜಗಳದ ಕಾರಣ ಯಾದವರ ಮತಗಳು ನಮಗೆ ದೊರಕಿಲ್ಲ. ಮುಸ್ಲಿಂ ಪ್ರಾಬಲ್ಯವಿರುವ ಪಕ್ಷ ಕ್ಷೇತ್ರದಲ್ಲಿ ಗೆದ್ದಿದೆ. ಚುನಾವಣೆಗೂ ಮುನ್ನ ಶಿವಪಾಲ್ ಪ್ರಗತಿಶೀಲ ಸಮಾಜವಾದಿ ಪಕ್ಷ ಸ್ಥಾಪಿಸಿದ್ದು, ಸಮಾಜವಾದಿ ಪಕ್ಷದ ಮತಗಳು ವಿಭಜನೆಯಾಗಲು ಕಾರಣವಾಯಿತು ಮತ್ತು ಅದು ಮಹಾಮೈತ್ರಿಗೆ ಹೊಡೆತಕೊಟ್ಟಿದೆ. ಇದರಿಂದ ಎಸ್‍ಪಿಯ ಪ್ರಬಲ ಅಭ್ಯರ್ಥಿ ಕೂಡ ಸೋಲು ಕಾಣುವಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೂಲಗಳ ಪ್ರಕಾರ ಮಾಯಾವತಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಬಯಕೆ ಹೊಂದಿದ್ದರು. ಚುನಾವಣಾ ಫಲಿತಾಂಶದಿಂದ ಮಾಯವತಿ ಅಸಮಾಧಾನಗೊಂಡಿದ್ದಾರೆ. ನಾವು ಎಸ್‍ಪಿ ಪ್ರಯತ್ನವನ್ನು ಶ್ಲಾಘಿಸುತ್ತೇವೆ ಆದರೆ ಮೈತ್ರಿ ಗೆಲುವು ಮತಗಳ ವರ್ಗಾವಣೆಯಿಂದ ಮಾತ್ರ ಅಳೆಯಲು ಸಾಧ್ಯ ಆದರೆ ಅದೇ ಆಗಿಲ್ಲ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

ಭಾನುವಾರ ನಡೆದ ಸಭೆಯಲ್ಲಿ ಮಾಯಾವತಿ ಉತ್ತರ ಪ್ರದೇಶದ ಪಕ್ಷದ ಘಟಕದಲ್ಲಿ ಹಲವಾರು ಬದಲಾಣೆಗಳನ್ನು ಮಾಡಿದ್ದು, ರಾಜ್ಯವನ್ನು ಪಶ್ಚಿಮ, ಲಕ್ನೋ, ಗೋರಖ್‍ಪುರ್, ವಾರಣಾಸಿ ಎಂದು ನಾಲ್ಕು ಭಾಗಗಳಾಗಿ ವಿಂಗಡಿಸಿದ್ದು. ಪಕ್ಷವನ್ನು ಬೇರುಮಟ್ಟದಿಂದ ಸದೃಢಗೊಳಿಸಲು ನಿರ್ಧರಿಸಲಾಗಿದೆ. ಉತ್ತರಾಖಂಡ, ಬಿಹಾರ, ಒಡಿಶಾ, ಗುಜರಾತ್, ರಾಜಸ್ಥಾನ ಮತ್ತು ಜಾರ್ಖಂಡ್, ಡೆಲ್ಲಿ, ಮಧ್ಯಪ್ರದೇಶಗಳಲ್ಲಿ ಅಧ್ಯಕ್ಷರನ್ನು ಸೇರಿದಂತೆ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶವನ್ನು ಬಿಟ್ಟು ಬೇರೆ ರಾಜ್ಯಗಳಲ್ಲಿ ಬಿಎಸ್‍ಪಿ ಒಂದೂ ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *