ವಾಷಿಂಗ್ಟನ್: ಅಮೆರಿಕದ (America) ಡಲ್ಲಾಸ್‌ನ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುತ್ತಿದ್ದ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದ (Southwest Flight) ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಡಲ್ಲಾಸ್ ಲವ್ ಫೀಲ್ಡ್ ಏರ್‌ಪೋರ್ಟ್‌ನಲ್ಲಿ ವಿಮಾನ ಟೇಕ್‌ಆಫ್ ಆಗುತ್ತಿತ್ತು. ಈ ವೇಳೆ ಗುಂಡಿನ ದಾಳಿ ನಡೆದಿದೆ. ಪರಿಣಾಮ ಕಾಕ್‌ಪಿಟ್ ಬಳಿ ಗುಂಡು ತಗುಲಿದೆ. ಬಳಿಕ ವಿಮಾನ ಹಾರಾಟವನ್ನು ರದ್ದು ಮಾಡಿ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು.
ಈ ವಿಮಾನವು ಟೆಕ್ಸಾಸ್‌ನ ಡಲ್ಲಾಸ್‌ನಿಂದ ಇಂಡಿಯಾನಾಕ್ಕೆ ಹೊರಟಿತ್ತು. ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಡಲ್ಲಾಸ್ ಲವ್ ಫೀಲ್ಡ್ ವಿಮಾನ ನಿಲ್ದಾಣ, ದಾಳಿಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದೆ.
ದಾಳಿಯಲ್ಲಿ ವಿಮಾನದ ಬಲಭಾಗಕ್ಕೆ ಗುಂಡು ತಗುಲಿದೆ. ದಾಳಿಯ ಬಳಿಕ ಹಾನಿಗೊಳಗಾದ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಸೌತ್‌ವೆಸ್ಟ್ ವಿಮಾನದ ವಕ್ತಾರರು ತಿಳಿಸಿದ್ದಾರೆ.
ಈ ಸಂಬಂಧ ಡಲ್ಲಾಸ್‌ನ ಪೊಲೀಸರು ಘಟನೆಯ ಕುರಿತು ತನಿಖೆ ಪ್ರಾರಂಭಿಸಿದ್ದಾರೆ. ಗುಂಡಿನ ದಾಳಿ ನಡೆಸಿದವರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.