ಕೆಲ ದಿನಗಳಿಂದ ತಮಿಳಿನ ಖ್ಯಾತ ನಟಿ ನಯನತಾರಾ ಮದುವೆ ಆಗಿದ್ದಾರೆ ಎನ್ನುವ ಸುದ್ದಿಯಿತ್ತು. ಅಲ್ಲದೇ, ಅವರು ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿತ್ತು. ಈಗಾಗಲೇ ನಿರ್ದೇಶಕ ವಿಘ್ನೇಶ್ ಶಿವನ್ ಜತೆ ನಯನತಾರಾ ಸಹಜೀವನ ನಡೆಸುತ್ತಿದ್ದು, ಅವರಿಬ್ಬರೂ ಸದ್ಯದಲ್ಲೇ ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯಲಿದ್ದಾರೆ ಎಂದು ಬಹುತೇಕ ಮಾಧ್ಯಮಗಳು ಸುದ್ದಿ ಮಾಡಿದ್ದವು. ಕೊನೆಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ವರ್ಷಗಳ ನಂತರ ನಯನತಾರಾ ಮೌನ ಮುರಿದಿದ್ದಾರೆ.
ನಿರ್ದೇಶಕ ವಿಘ್ನೇಶ್ ಶಿವನ್ ಮತ್ತು ನಯನತಾರಾ ಒಟ್ಟಿಗೆ ಇರುವ ಹಲವು ಫೋಟೋಗಳು ಲೀಕ್ ಆದರೂ, ಅವರಿಬ್ಬರೂ ಒಂದೇ ಮನೆಯಲ್ಲೇ ವಾಸ ಮಾಡುತ್ತಿದ್ದಾರೆಂಬ ವಿಷಯ ಹೊರ ಬಿದ್ದರೂ ಈ ಕುರಿತು ಇಬ್ಬರೂ ಒಂದೇ ಒಂದು ಮಾತನ್ನೂ ಹೇಳಿರಲಿಲ್ಲ. ಮೊದಲ ಬಾರಿಗೆ ನಯನತಾರಾ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ: ಕಾದಂಬರಿ ಆಧರಿತ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ
“ನಾನು ಕದ್ದುಮುಚ್ಚಿ ಮದುವೆ ಆಗಿಲ್ಲ. ಅಸಲಿಯಾಗಿ ನನಗೆ ಮದುವೆಯೇ ಆಗಿಲ್ಲ. ಮದುವೆ ಆಗದೇ ಬಾಡಿಗೆ ತಾಯಿ ಮೂಲಕ ಮಗುವನ್ನು ಪಡೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ಹಾಗಾಗಿ ಕೇಳಿ ಬರುತ್ತಿರುವ ಎಲ್ಲ ಸುದ್ದಿಗಳು ಸುಳ್ಳು’ ಎಂದು ಅವರು ಹೇಳಿದ್ದಾರೆ. ಜತೆಗೆ ಇಂತಹ ಸುದ್ದಿಗಳನ್ನು ನಂಬಬೇಡಿ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ನಯನತಾರಾ ಏನೇ ಹೇಳಿದರೂ ಅವರ ಆಪ್ತರು ಮಾತ್ರ ಅವರ ಮಾತನ್ನು ಒಪ್ಪುತ್ತಿಲ್ಲ. ಹಲವು ತಿಂಗಳಿಂದ ನಿರ್ದೇಶಕ ವಿಘ್ನೇಶ್ ಜತೆ ಒಂದೇ ಮನೆಯಲ್ಲೇ ನಯನತಾರಾ ವಾಸಿಸುತ್ತಿದ್ದಾರೆ. ಅಲ್ಲದೇ, ಅನೇಕ ದೇವಸ್ಥಾನಗಳಿಗೆ ಒಟ್ಟಿಗೆ ಹೋಗಿದ್ದಾರೆ. ಖಾಸಗಿತನ ಕಳೆಯುವುದಕ್ಕಾಗಿ ಹಲವು ರೆಸಾರ್ಟ್ ಗಳಲ್ಲೂ ಈ ಜೋಡಿ ಕಾಣಿಸಿಕೊಂಡಿದೆ. ಹೀಗಾಗಿ ಸಹಜವಾಗಿಯೇ ಮದುವೆ ವಿಷಯ ಪ್ರಸ್ತಾಪವಾಗಿದೆ ಎನ್ನುತ್ತಾರೆ.