ಕೊಪ್ಪಳ: ದಕ್ಷಿಣ ಭಾರತದ ಕುಂಭಮೇಳ ಅಂತ ಕರೆಯುವ ಕೊಪ್ಪಳದ (Koppal) ಗವಿಮಠದ (Gavi Mutt) ಜಾತ್ರೆ ಇಂದಿನಿಂದ ಆರಂಭವಾಗಿದ್ದು, ಅದ್ದೂರಿ ಚಾಲನೆ ದೊರೆತಿದೆ.
ಕೊಪ್ಪಳದ ಗವಿಮಠದ ಜಾತ್ರೆಗೆ ರಾಜ್ಯದಿಂದ, ನಾಡಿನ ವಿವಿಧ ಮೂಲೆಗಳಿಂದ ಲಕ್ಷ ಲಕ್ಷ ಭಕ್ತರು ಬರುತ್ತಾರೆ. ಇಂದು ಮಹಾರಥೋತ್ಸವ ಹಿನ್ನೆಲೆ ಮಠಕ್ಕೆ ಅಪಾರ ಜನಸ್ತೋಮವೇ ಹರಿದು ಬಂದಿತ್ತು. 210ನೇ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಮೇಘಾಲಯ ರಾಜ್ಯಪಾಲ ಚಂದ್ರಶೇಖರ ಎಚ್.ವಿಜಯಶಂಕರ ಅವರು ಚಾಲನೆ ನೀಡಿದರು. ತಟಸ್ಥಲ ಧ್ವಜ ಏರುತ್ತಿದ್ದಂತೆಯೇ ರಥ ಮುಂದೆ ಸಾಗಿತು. ಬರೋಬ್ಬರಿ 5.45ಕ್ಕೆ ಆರಂಭವಾದ ಮಹಾರಥ ಭಕ್ತರ ಸಾಗರದ ಜಯ ಘೋಷದ ನಡುವೆ ರಾಜ ಗಾಂಭೀರ್ಯದೊಂದಿಗೆ ಮುಂದೆ ಸಾಗಿತು. ತೇರಿನ ಸುತ್ತಲೂ ನೆರೆದಿದ್ದ ಲಕ್ಷೋಪ ಲಕ್ಷ ಭಕ್ತರು ‘ಗವಿಸಿದ್ದೇಶ್ವರ ಮಹಾರಾಜಕೀ ಜೈ’ ಎಂದು ಘೋಷಣೆ ಕೂಗುವ ಮೂಲಕ ರಥ ಎಳೆದರು. ರಥದ ಸುತ್ತಲೂ ಸೇರಿದ್ದ ನಾಡಿನ ನಾನಾ ಭಾಗದಿಂದ ಬಂದಿದ್ದ ಭಕ್ತರು ರಥೋತ್ಸವಕ್ಕೆ ಕೈ ಮುಗಿದು ಭಕ್ತಿ-ಭಾವದಿಂದ ಕಣ್ತುಂಬಿಕೊಂಡರು. ಅನೇಕರು ರಥದ ಕಳಶಕ್ಕೆ ಉತ್ತತ್ತಿ ಎಸೆದು ಧನ್ಯತೆ ಮೆರೆದರು.
ಸಂಪ್ರದಾಯದಂತೆ ಪಾದಗಟ್ಟೆ ಬಳಿ ಪೂಜೆ ನೆರವೇರಿಸಿ, ಮತ್ತೇ ಭಕ್ತರು ರಥ ಎಳೆದರು. ಬರೋಬ್ಬರಿ 6.05ಕ್ಕೆ ಸ್ವಸ್ಥಾನ ತಲುಪಿತು. ರಥ ಮೂಲ ಸ್ಥಾನದಲ್ಲಿ ನಿಲ್ಲುತ್ತಿದ್ದಂತೆಯೇ ಭಕ್ತರು ಜಯ ಘೋಷ ಮೊಳಗಿಸಿ, ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಮಹಾರಥೋತ್ಸವದ ಮುಂದೆ ನಂದಿ ಕೋಲಿನ ಕುಳಿತ ಸೇರಿ ಸಾಂಪ್ರದಾಯಿಕ ಕಲಾ ತಂಡಗಳು ಭಕ್ತರನ್ನು ಮಂತ್ರ ಮುಗ್ಧರನ್ನಾಗಿ ಮಾಡಿದ್ದವು.
ಈ ಮೊದಲು ಗವಿಮಠದ ಗದ್ದುಗೆಯಿಂದ ಉತ್ಸವ ಮೂರ್ತಿಯನ್ನು ಭಕ್ತಗಣದ ನಡುವೆ ಮಹಾರಥೋತ್ಸವಕ್ಕೆ ತರಲಾಯಿತು. ನಂದಿ ಕೋಲು ಸೇರಿ ನಾನಾ ಸಾಂಪ್ರದಾಯಿಕ ಕಲಾ ತಂಡಗಳು ಸಾಥ್ ನೀಡಿದ್ದವು. ನಂತರ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಭಾರಿ ಬಂದೋಬಸ್ತನಲ್ಲಿ ಮಹಾರಥೋತ್ಸವದ ಬಳಿಗೆ ತೆರಳಿ, ಪೂಜೆ ಸಲ್ಲಿಸಿ ವೇದಿಕೆಗೆ ಆಗಮಿಸಿದರು. ಕನಕಗುರು ಪೀಠ ಕಾಗಿನೆಲೆಯ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೆಬ್ಬಾಳಶ್ರೀ, ಹಿರೇಸಿಂದೋಗಿ ಕಪ್ಪತೇಶ್ವರ ಮಠದ ಚಿದಾನಂದ ಸ್ವಾಮೀಜಿ ಸೇರಿ ನಾನಾ ಮಠಗಳ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.
ಕೇಂದ್ರ ರಾಜ್ಯ ಖಾತೆ ರೈಲ್ವೇ ಮಂತ್ರಿ ವಿ.ಸೋಮಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಶಾಸಕರಾದ ರಾಘವೇಂದ್ರ ಹಿಟ್ನಾಳ, ಜನಾರ್ದನ ರೆಡ್ಡಿ, ಹೇಮಲತಾ ನಾಯಕ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಮಾಜಿ ಸಂಸದರಾದ ಸಂಗಣ್ಣ ಕರಡಿ, ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಡೆಸುಗೂರ, ಲೋಕಸಭೆ ಪರಾಜಿತ ಅಭ್ಯರ್ಥಿ ಡಾ.ಬಸವರಾಜ ಕ್ಯಾವಟರ್, ಮುಖಂಡರಾದ ದೊಡ್ಡ ಬಸವನಗೌಡ ಭಯ್ಯಾಪೂರ, ವಿರೇಶ ಮಹಾಂತಯ್ಯನಮಠ,ಡಿಸಿ ಸುರೇಶ ಹಿಟ್ನಾಳ, ಎಸ್ಪಿ ಡಾ.ರಾಮ್.ಎಲ್.ಅರಸಿದ್ದಿ, ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ ಸೇರಿ ಇತರರು ಇದ್ದರು.
ಇನ್ನೂ ಮಠದ ಜಾತ್ರೆ ಹೇಗೆ ಸುಪ್ರಸಿದ್ದವೋ, ಅದೇ ರೀತಿ ಮಠದ ಪ್ರಸಾದ ಕೂಡಾ ಅಷ್ಟೇ ಸುಪ್ರಸಿದ್ದ. ಕೊಪ್ಪಳ ಗವಿಮಠದ ದಾಸೋಹ, ಕೇವಲ ಪ್ರಸಾದವಾಗದೇ, ಅದು ಭಕ್ಷ್ಯ ಭೋಜನವಾಗಿರುತ್ತದೆ. ಇಂದು ಮಠದ ಜಾತ್ರೆಗೆ ಬಂದವರಿಗೆ ರೊಟ್ಟಿ, ಹೆಸರು ಕಾಳು ಪಲ್ಲೆ, ಬದನೆಕಾಯಿ ಪಲ್ಲೆ, ಕೆಂಪು ಚಟ್ನಿ, ಮಾದಲಿ, ಹಾಲು, ತುಪ್ಪ, ಮೈಸೂರು ಪಾಕ್, ಅನ್ನ ಸಾರು ಸೇರಿದಂತೆ ಅನೇಕ ಆಹಾರವನ್ನು ಬಡಿಸಲಾಯಿತು. ಇದನ್ನೂ ಓದಿ: KPCL ನೇಮಕಾತಿ: 8 ದಿನಗಳಲ್ಲಿ ತಾತ್ಕಾಲಿಕ ಫಲಿತಾಂಶ ಪ್ರಕಟ – ಕೆಇಎ
ನೂರಾ ಐವತ್ತಕ್ಕೂ ಹೆಚ್ಚು ಬಾಣಸಿಗರು ನಸುಕಿನ ಜಾವದಿಂದಲೇ ಆಹಾರ ರೆಡಿ ಮಾಡುತ್ತಿದ್ದು, ಎಷ್ಟೇ ಭಕ್ತರು ಬಂದ್ರು ಕೂಡಾ ಅವರಿಗೆ ಊಟದ ಕೊರತೆಯಾಗದಂತೆ ಅಡುಗೆಯನ್ನು ಸಿದ್ಧಗೊಳಿಸಿ, ಭಕ್ತರಿಗೆ ನೀಡೋ ವ್ಯವಸ್ಥೆ ಮಾಡಲಾಗಿದೆ. ಊಟ ಬಡಿಸಲಿಕ್ಕೆಂದೆ ನೂರಾರು ಕೌಂಟರ್ ಆರಂಭಿಸಿದ್ದು, ಸರಿಸುಮಾರು ಸಾವಿರದ ಐನೂರಕ್ಕೂ ಹೆಚ್ಚು ಜನರು, ಅಡುಗೆ ಮಾಡುವುದು, ಅದನ್ನು ಅಚ್ಚುಕಟ್ಟಾಗಿ ಬಡಿಸೋ ಕೆಲಸವನ್ನು ಮಾಡುತ್ತಿದ್ದಾರೆ.
ಈ ವರ್ಷದ ಜಾತ್ರೆಯಲ್ಲಿ ಭಕ್ತಾದಿಗಳಿಗೆ ಸಿಹಿ ಉಣಬಡಿಸಲು ರಾಯಚೂರು ಜಿಲ್ಲೆಯ ಸಿಂಧನೂರು ಗೆಳೆಯರ ಬಳಗ ಮುಂದಾಗಿದೆ. ಕಳೆದ 10 ವರ್ಷಗಳಿಂದ ನಿರಂತರವಾಗಿ ಮಠದ ಸೇವೆಯಲ್ಲಿ ತೊಡಗಿರುವ ಈ ತಂಡ, ಈ ಬಾರಿ ಬರೋಬ್ಬರಿ 10 ಲಕ್ಷ ಮೈಸೂರು ಪಾಕ್ ತಯಾರಿಸುವ ಗುರಿ ಹೊಂದಿದೆ. ಇಂದಿನಿಂದ ಎರಡು ದಿನಗಳ ಕಾಲ ಅಹೋರಾತ್ರಿ ಈ ತಯಾರಿಕಾ ಕಾರ್ಯ ನಡೆಯುತ್ತಿದೆ. ಮಠದ ಆವರಣದಲ್ಲಿ ಮೈಸೂರು ಪಾಕ್‌ನ ಘಮಲು ಎಲ್ಲೆಡೆ ಹರಡಿದೆ.
ಇನ್ನು ಈ ಬೃಹತ್ ಪ್ರಮಾಣದ ಮೈಸೂರು ಪಾಕ್ ತಯಾರಿಗಾಗಿ ಬಳಕೆಯಾಗುತ್ತಿರುವ ಪದಾರ್ಥಗಳ ಪಟ್ಟಿ ನೋಡಿದರೆ ನೀವು ಬೆರಗಾಗೋದು ಗ್ಯಾರಂಟಿ. ಸುಮಾರು 60 ಕ್ವಿಂಟಾಲ್ ಸಕ್ಕರೆ, 40 ಕ್ವಿಂಟಾಲ್ ಕಡ್ಲೆ ಹಿಟ್ಟು, 5 ಸಾವಿರ ಲೀಟರ್ ಎಣ್ಣೆ, 3 ಕ್ವಿಂಟಾಲ್ ತುಪ್ಪ ಹಾಗೂ 50 ಕೆ.ಜಿ ಏಲಕ್ಕಿಯನ್ನು ಇಲ್ಲಿ ಬಳಸಲಾಗುತ್ತಿದೆ. ಸುಮಾರು 150ಕ್ಕೂ ಹೆಚ್ಚು ಅನುಭವಿ ಬಾಣಸಿಗರು ಶಿಸ್ತುಬದ್ಧವಾಗಿ ಈ ರುಚಿಕರ ಸಿಹಿಯನ್ನು ಸಿದ್ಧಪಡಿಸುತ್ತಿದ್ದಾರೆ. ಲಕ್ಷ ಲಕ್ಷ ಭಕ್ತರು ಗವಿಮಠ ಜಾತ್ರೆಯಲ್ಲಿ ಮಹಾಪ್ರಸಾದ ಸೇವಿಸುತ್ತಾರೆ.
ಕೊಪ್ಪಳ ಗವಿಮಠದ ಜಾತ್ರೆಯ ದಾಸೋಹ ಜನವರಿ 1ರಿಂದಲೇ ಆರಂಭವಾಗಿದ್ದು, ಜನವರಿ 18ರವರೆಗೆ ನಡೆಯಲಿದೆ. ಅದರಂತೆ ಜನವರಿ 1ರಂದು ಅಡುಗೆ ಮಾಡಲು ಹಚ್ಚಿರುವ ಬೆಂಕಿ, ಜನವರಿ 18ರವರೆಗೆ ಉರಿಯಲಿದೆ. ಈ ಜಾತ್ರೆಗೆ ಬರೋರು ಪ್ರಸಾದ ಸೇವಿಸಿ, ಜೈ ಗವಿಸಿದ್ದೇಶ್ವರ ಮಹರಾಜ್ ಕಿ ಜೈ ಅಂತ ಜೈಕಾರ ಹಾಕಿ ಸಂಭ್ರಮಿಸುತ್ತಾರೆ.ಇದನ್ನೂ ಓದಿ: ಹೆದರಬೇಡ ಅಪ್ಪಿ ಅಂತಿದ್ರು, ಆದ್ರೆ ಮಾಳು ಸ್ಟೇಟ್ಮೆಂಟ್ ಕೇಳಿ ಅಚ್ಚರಿ ಆಯ್ತು – ಸ್ಪಂದನಾ


