ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕರಲ್ಲೊಬ್ಬರು ಅಟ್ಲಿ. ಕಮರ್ಷಿಯಲ್ ಸಿನಿಮಾದ ಮುಖ ಬದಲಿಸುವುದರ ಜತೆಗೆ ಅತ್ಯಂತ ಯಶಸ್ವಿ ನಿರ್ದೇಶಕ ಎಂಬ ಖ್ಯಾತಿ ಇರುವ ಅಟ್ಲಿ, ತಮಿಳಿನಲ್ಲಿ ಖ್ಯಾತ ನಟ ‘ಇಳಯ ದಳಪತಿ’ ವಿಜಯ್ ಅಭಿನಯದಲ್ಲಿ ‘ಥೇರಿ’, ‘ಮರ್ಸಲ್’, ‘ಬಿಜಿಲ್’ ಮುಂತಾದ ಯಶಸ್ವಿ ಮತ್ತು ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದವರು. ಇದೀಗ ಶಾರೂಖ್ ಅಭಿನಯದ ‘ಜವಾನ್’ ಚಿತ್ರವನ್ನು ಅವರು ನಿರ್ದೇಶಿಸುತ್ತಿದ್ದು, ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುತ್ತಿದೆ.
ತಮ್ಮ ಬಹುವರ್ಷಗಳ ಗೆಳತಿ ಕೃಷ್ಣ ಪ್ರಿಯಾ ಅವರನ್ನು 2014ರಲ್ಲಿ ಮದುವೆಯಾದ ಅಟ್ಲಿ, ಅವರೊಂದಿಗೆ ನೆಮ್ಮದಿಯ ವೈವಾಹಿಕ ಜೀವನ ನಡೆಸುತ್ತಿದ್ದಾರೆ. ಈ ದಂಪತಿಯು ಎ ಫಾರ್ ಆಪಲ್ ಪ್ರೊಡಕ್ಷನ್ ಎಂಬ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿ, ಅದರಡಿ ಎರಡು ಯಶಸ್ವಿ ಚಿತ್ರಗಳನ್ನು ನಿರ್ಮಿಸಿದೆ. ಮದುವೆಯಾಗಿ ಎಂಟು ವರ್ಷಗಳ ನಂತರ, ಇದೀಗ ಅಟ್ಲಿ ಮತ್ತು ಪ್ರಿಯಾ ಹೊಸ ಅನುಭವಕ್ಕೆ ತಯಾರಾಗುತ್ತಿದ್ದಾರೆ. ಪುಟ್ಟ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ: IMDB 2022ರ ಜನಪ್ರಿಯ ಭಾರತೀಯ ಸಿನಿಮಾ ಪಟ್ಟಿಯಲ್ಲಿ ಕನ್ನಡದ ಟಾಪ್ 3 ಚಿತ್ರಗಳು
ಈ ವಿಷಯವನ್ನು ಅಧಿಕೃತವಾಗಿ ಘೋಷಿಸಿರುವ ಅವರು, ‘ಇಷ್ಟು ವರ್ಷಗಳ ಕಾಲ ನಮ್ಮ ಮೇಲೆ ಜನ ತೋರಿದ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾವು ಕೃತಜ್ಞರಾಗಿರುತ್ತೇವೆ, ನಿಮ್ಮ ಹಾರೈಕೆ ಮತ್ತು ಪ್ರೀತಿ ನಮ್ಮ ಪುಟ್ಟ ಮಗುವಿನ ಮೇಲೆಯೂ ಇರಬೇಕು ಎಂದು ನಾವು ಬಯಸುತ್ತೇವೆ. ನಿಮ್ಮೆಲ್ಲರ ಆಶೀರ್ವಾದದಿಂದ ನಮ್ಮ ಪುಟ್ಟ ಮಗುವಿನ ಆಗಮನಕ್ಕಾಗಿ ಕಾತುರದಿಂದ ಕಾಯುತ್ತಿದ್ದೇವೆ’ ಎಂದು ಅಟ್ಲಿ ಮತ್ತು ಪ್ರಿಯಾ ಹೇಳಿಕೊಂಡಿದ್ದಾರೆ.