ಬ್ರೈನ್ ಟ್ಯೂಮರ್ ಮೆದುಳಿಗೆ ಸಂಬಂಧ ಪಟ್ಟ ಆರೋಗ್ಯ ಸಮಸ್ಯೆಯಾಗಿದ್ದು, ಇದನ್ನು ʼಮೆದುಳಿನ ಕ್ಯಾನ್ಸರ್’ ಎಂದು ಕರೆಯುತ್ತಾರೆ. ಮೆದುಳಿನ ಜೀವಕೋಶಗಳು ಕೆಲವೊಂದು ಕಾರಣಗಳಿಂದ ನಿಧಾನವಾಗಿ ಹಾನಿಯಾಗಿ ಗೆಡ್ಡೆಯಾಕಾರದಲ್ಲಿ ಬೆಳೆದು ಈ ಕಾಯಿಲೆಯಾಗಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೂ ಆರಂಭದ ಹಂತದಲ್ಲೇ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಹತೋಟಿಯಲ್ಲಿಡಬಹುದು. ಇನ್ನೂ ಕೆಲವೇ ಕೆಲವು ಬೆರಳೆಣಿಕೆಯಷ್ಟು ಜನ ಗುಣಮುಖರಾಗುತ್ತಾರೆ ಎಂಬ ಮಾತಿದೆ. ಇದೀಗ ಈ ಸಮಸ್ಯೆಗೆ ನೂತನ ಚಿಕಿತ್ಸೆಯಾದ ZAP-X ಭಾರತದಲ್ಲಿ ಲಭ್ಯವಿದ್ದು, ಇದು ದಕ್ಷಿಣ ಏಷ್ಯಾದಲ್ಲೇ ಮೊದಲಾಗಿದೆ.
ಮಾರಣಾಂತಿಕ ಕಾಯಿಲೆಯಾದ ಬ್ರೈನ್ ಟ್ಯೂಮರ್ ವಿರುದ್ಧ ಇಡೀ ವೈದ್ಯಕೀಯ ಲೋಕವೇ ಹೋರಾಡುತ್ತಿದೆ. ಅದೇ ರೀತಿ ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಟ್ಟಿದೆ. ದಕ್ಷಿಣ ಏಷ್ಯಾದಲ್ಲೇ ಮೊದಲ ಬಾರಿಗೆ ಈ ಆಸ್ಪತ್ರೆಯಲ್ಲಿ ZAP-X ಯಂತ್ರವನ್ನು ಅಳವಡಿಸಲಾಗಿದ್ದು, ಇದು ಮೆದುಳಿನ ಕ್ಯಾನ್ಸರ್‌ಗೆ ನೋವಿಲ್ಲದ ಚಿಕಿತ್ಸಾ ವಿಧಾನವಾಗಿದೆ. ಈ ವಿಧಾನದಲ್ಲಿ ಕ್ಯಾನ್ಸರ್ ಸೆಲ್‌ಗಳನ್ನು ಅಥವಾ ಗಡ್ಡೆಗಳನ್ನು ಕರಗಿಸಲು ನಿಖರವಾಗಿ ವಿಕಿರಣವನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಒಂದೇ ಸೆಷನ್‌ನಲ್ಲಿ ಚಿಕಿತ್ಸೆ ನೀಡಬಹುದಾಗಿದೆ. ಇದನ್ನೂ ಓದಿ: ಸಿಎಎಗೆ ತಡೆ ಇಲ್ಲ: ಅರ್ಜಿಗಳಿಗೆ 3 ವಾರದಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸುಪ್ರೀಂ ಸೂಚನೆ
Advertisement
Advertisement
ಬ್ರೈನ್ ಟ್ಯೂಮರ್ ಸಮಸ್ಯೆ ಮೊದಲು ಮೆದುಳಿನಲ್ಲಿ ಪ್ರಾರಂಭವಾದರೆ ಅದನ್ನು ‘ ಪ್ರೈಮರಿ ಬ್ರೈನ್ ಟ್ಯೂಮರ್ ‘ ಎಂದು, ಮನುಷ್ಯನ ದೇಹದ ಇತರ ಭಾಗಗಳಲ್ಲಿ ಕ್ಯಾನ್ಸರ್ ಕಾಯಿಲೆ ಉಂಟಾಗಿ ನಂತರ ಅದು ಮೆದುಳಿಗೆ ಹಬ್ಬಿದರೆ ಅದನ್ನು ‘ ಸೆಕೆಂಡರಿ ಬ್ರೈನ್ ಟ್ಯೂಮರ್ ‘ ಅಥವಾ ‘ ಮೆಟಾಸ್ಟಾಟಿಕ್ ಬ್ರೈನ್ ಟ್ಯೂಮರ್ ‘ ಎಂದು ಗುರುತಿಸಲಾಗುತ್ತದೆ.
Advertisement
ZAP-X ಹೇಗೆ ಕೆಲಸ ಮಾಡುತ್ತದೆ?
Advertisement
ಯಂತ್ರವು ಹೆಚ್ಚಿನ ತೀವ್ರತೆಯ, ಕೇಂದ್ರೀಕೃತ ವಿಕಿರಣವನ್ನು ಕೇವಲ ಮೆದುಳಿನ ಗೆಡ್ಡೆಗೆ ಕಡಿಮೆ ಅಂತರದಲ್ಲಿ ತಲುಪಿಸುತ್ತದೆ. ಇದರಿಂದ ಸುತ್ತಮುತ್ತಲಿನ ಅಂಗಾಂಶಗಳಿಗೆ ಈ ಚಿಕಿತ್ಸೆಯಿಂದ ಹಾನಿ ಉಂಟಾಗದೆ, ಕೇವಲ ಗೆಡ್ಡೆಯನ್ನು ಮಾತ್ರ ಗುರಿಯಾಗಿಸಿ ದಾಳಿ ಮಾಡುತ್ತದೆ. ಇದರಿಂದಾಗಿ ಕ್ಯಾನ್ಸರ್ ಗಡ್ಡೆ ಕರಗುತ್ತದೆ.
ಯಂತ್ರದ ಸೃಷ್ಟಿಕರ್ತ ಮತ್ತು Zap ಶಸ್ತ್ರಚಿಕಿತ್ಸಾ ಸಿಇಒ ಡಾ.ಜಾನ್ ಆಡ್ಲರ್ ಪ್ರಕಾರ, ರೇಡಿಯೊ ಸರ್ಜರಿಯು ಅಮೆರಿಕಾದಲ್ಲಿ ನರಶಸ್ತ್ರ ಚಿಕಿತ್ಸಕರು ಮಾಡುವ ಅತ್ಯಂತ ಸಾಮಾನ್ಯವಾದ ವಿಧಾನವಾಗಿದೆ. ಪ್ರಪಂಚದ ಎಲ್ಲಾ ಭಾಗಗಳನ್ನು ಗಮನದಲ್ಲಿಟ್ಟುಕೊಂಡು ಈ ಯಂತ್ರವನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ಭಾರತದಲ್ಲಿ ಸುಮಾರು 10 ಲಕ್ಷ ಜನರು ಈ ಚಿಕಿತ್ಸೆಯಿಂದ ಪ್ರಯೋಜನ ಪಡೆಯಬಹುದು ಎಂಬುದು ಅವರ ಅಭಿಪ್ರಾಯ.
ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗಿಂತ ZAP-X ಹೇಗೆ ಭಿನ್ನ?
ರೋಗಿಗಳು ಆಸ್ಪತ್ರೆಗೆ ದಾಖಲಾದ ಒಂದು ದಿನದಲ್ಲೇ ಡಿಸ್ಚಾರ್ಜ್ ಮಾಡಬಹುದು. ZAP-X ಚಿಕಿತ್ಸೆಗೆ ಅರಿವಳಿಕೆ ನೀಡುವ ಅಗತ್ಯ ಇರುವುದಿಲ್ಲ. ಚಿಕಿತ್ಸೆಯ ನಂತರ ವಿಶ್ರಾಂತಿಯ ಅಗತ್ಯವಿಲ್ಲದೆ ರೋಗಿಗಳು ಮನೆಗೆ ತೆರಳಬಹುದಾಗಿದೆ. ಚಿಕಿತ್ಸೆಯನ್ನು ಕೇವಲ 30 ನಿಮಿಷದಿಂದ ಗರಿಷ್ಠ 1 ಗಂಟೆ 30 ನಿಮಿಷಗಳವರೆಗೆ ಒಂದೇ ಅವಧಿಯಲ್ಲಿ ಮಾಡಲಾಗುತ್ತದೆ. ಗೆಡ್ಡೆ ತುಂಬಾ ದೊಡ್ಡದಾಗಿದ್ದರೆ ಅಥವಾ ಮೆದುಳಿನಲ್ಲಿನ ಪ್ರಮುಖ ರಚನೆಗಳಿಗೆ ಹತ್ತಿರದಲ್ಲಿದ್ದಾಗ ಮಾತ್ರ ಹೆಚ್ಚಿನ ಸಮಯ ಹಿಡಿಯುತ್ತದೆ ಎಂಬುದು ವೈದ್ಯರ ಅಭಿಪ್ರಾಯ.
ಮೆದುಳಿನ ಆಳವಾದ, ಬಹುಮುಖ್ಯ ರಚನೆಗಳಿಗೆ ಹತ್ತಿರವಿರುವ (ಇತರ ಸಮಸ್ಯೆಗಳಿಗೆ ಸ್ಕ್ಯಾನ್ ಮಾಡುವಾಗ ಪತ್ತೆಯಾದ ಸಣ್ಣ ಗೆಡ್ಡೆಗಳು) ರೋಗಿಗಳಿಗೆ ಇದು ಶಸ್ತ್ರಚಿಕಿತ್ಸೆಗಿಂತ ಉತ್ತಮವಾಗಿರುತ್ತದೆ. ಯಂತ್ರವು ಗೆಡ್ಡೆಗಳಿಗೆ ಚಿಕಿತ್ಸೆ ನೀಡುವುದಲ್ಲದೆ, ಇದು ಮೆದುಳಿನಲ್ಲಿನ ಆಳವಾದ ಗಾಯಗಳು ಅಥವಾ ಅಪಧಮನಿಯ ವಿರೂಪತೆಗೆ ಸಹ ಚಿಕಿತ್ಸೆ ನೀಡುತ್ತದೆ.
ರೇಡಿಯೋ ಸರ್ಜರಿ ತಂತ್ರಗಳಲ್ಲಿ ಬಳಸುವ ರೇಡಿಯೋಥೆರಪಿಯಿಂದ Zap-X ಹೇಗೆ ಭಿನ್ನ?
ರೇಡಿಯೋಥೆರಪಿಯು ಸೂರ್ಯನ ಬೆಳಕಿನಂತೆ ಚದರುತ್ತದೆ. ಅಲ್ಲದೇ ಇದರ ಪರಿಣಾಮವು ಕಡಿಮೆಯಾಗಿದೆ. ಚಿಕಿತ್ಸೆಗೆ ತಗಲುವ ಸಮಯವು ಹೆಚ್ಚು. ರೇಡಿಯೊಸರ್ಜರಿ – ಮತ್ತು Zap-X ತಂತ್ರಜ್ಞಾನ ವಿಕಿರಣವನ್ನು ನಿರ್ದಿಷ್ಟ ಬಿಂದುವಿಗೆ ಕೇಂದ್ರೀಕರಿಸಲು ಭೂತಗನ್ನಡಿಯನ್ನು ಬಳಸುವುದಕ್ಕೆ ಸಮಾನವಾಗಿದೆ ಎಂಬುದು ಡಾ.ಆಡ್ಲರ್ ಅಭಿಪ್ರಾಯವಾಗಿದೆ.
ಚಿಕಿತ್ಸೆಯ ವೆಚ್ಚ ಎಷ್ಟು?
Zap-X ಚಿಕಿತ್ಸೆಯ ವೆಚ್ಚವು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ಸಮನಾಗಿರುತ್ತದೆ. ಇದರ ವೆಚ್ಚ ಭಾರತದಲ್ಲಿ 1,90,000 ರೂ. ಆಗಲಿದ್ದು, ಭಾರತದ ಹೊರಗೆ, ಇದರ ಬೆಲೆ ಸುಮಾರು 3,30,000 ರೂ. ಆಗಲಿದೆ.
ಈ ಹೊಸ ಬೆಳವಣಿಗೆಯು ಭಾರತದ ವೈದ್ಯಕೀಯ ಪ್ರವಾಸೋದ್ಯಮದ ಭವಿಷ್ಯವನ್ನು ವೃದ್ಧಿಸುವ ಭರವಸೆ ಮೂಡಿಸಿದೆ. ಏಕೆಂದರೆ ಇದರಿಂದ ದಕ್ಷಿಣ ಏಷ್ಯಾ ಮತ್ತು ಹತ್ತಿರದ ಪ್ರದೇಶಗಳ ಜನರಿಗೆ ಮೆದುಳಿನ ಗೆಡ್ಡೆಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಲಭ್ಯವಾಗಲಿದೆ. ಇದನ್ನೂ ಓದಿ: JMM ತೊರೆದು ಬಿಜೆಪಿ ಸೇರಿದ ಹೇಮಂತ್ ಸೊರೇನ್ ಸೊಸೆ ಸೀತಾ ಸೊರೇನ್