ನ್ಯೂಯಾರ್ಕ್: ಇಲ್ಲಿನ ನಾಸೌ ಕೌಂಟಿ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ಹಾಗೂ ದಕ್ಷಿಣ ಅಫ್ರಿಕಾ ನಡುವಿನ T20 World Cup ಪಂದ್ಯದಲ್ಲಿ ದಕ್ಷಿಣ ಅಫ್ರಿಕಾ ತಂಡ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿ ಶ್ರೀಲಂಕಾ ತಂಡ ದಕ್ಷಿಣ ಅಫ್ರಿಕಾ ತಂಡದ ಬೌಲರ್ ದಾಳಿಗೆ ತತ್ತರಿಸಿತು. 19.1 ಓವರ್‌ಗಳಲ್ಲಿ ಕೇವಲ 77 ರನ್ಗಳಿಗೆ ಶ್ರೀಲಂಕಾ ತಂಡ ಆಲೌಟ್ ಆಯಿತು. 78 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಅಫ್ರಿಕಾ ತಂಡ 16.2 ಓವರ್‌ಗಳಲ್ಲಿ 4ವಿಕೆಟ್ ನಷ್ಟಕ್ಕೆ 80 ರನ್‌ಗಳಿಸಿ ಗೆಲುವು ಸಾಧಿಸಿತು.
ದಕ್ಷಿಣ ಆಫ್ರಿಕಾ ತಂಡದ ಪರ ಕ್ವಿಂಟನ್ ಡೇ ಕೋಕ್ 27 ಎಸೆತಗಳಲ್ಲಿ 20, ಐಡೆನ್ ಮಾರ್ಕ್ರಾಮ್ 14 ಎಸೆತಗಳಲ್ಲಿ 12, ಟ್ರಿಸ್ಟಾನ್ ಸ್ಟಬ್ಸ್ 28 ಎಸೆತಗಳಲ್ಲಿ 13, ಹೆನ್ರಿಕ್ ಕ್ಲಾಸೆನ್ 22 ಎಸೆತಗಳಲ್ಲಿ 19 ರನ್ ಗಳಿಸಿದರು.
ಶ್ರೀಲಂಕಾ ಪರ ನುವಾನ್ ತುಷಾರಾ, ದಾಸುನ್ ಶನಕ ತಲಾ 1, ವನಿಂದು ಹಸರಂಗ 2 ವಿಕೆಟ್ ಉರುಳಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಕುಸಾಲ್ ಮೆಂಡಿಸ್ 30 ಎಸೆತಗಳಲ್ಲಿ 19, ಮ್ಯಾಥ್ಯೂಸ್ 16 ಎಸೆತಗಳಲ್ಲಿ 16, ಕುಮಿಂಡು ಮೆಂಡ್ ಎರಡಂಕಿ ದಾಟಿದ ಬ್ಯಾಟ್ಸ್ಮನ್ಗಳೆನಿಸಿಕೊಂಡರು. ಉಳಿದ ಬ್ಯಾಟರ್ಗಳೆಲ್ಲಾ ಒಂದಂಕಿ ರನ್‌ಗೆ ಸುಸ್ತಾದರು. ನಾಯಕ ವನಿಂದು ಹಸರಂಗ, ಸದೀರಾ ಸಮರವಿಕ್ರಮ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಪಾತುಮ್ ನಿಸ್ಸಾಂಕ(3), ಚರಿತ್ ಅಸಲಂಕಾ (6), ದಾಸುನ್ ಶನಾಕ (9), ತೀಕ್ಷಾಣ 7 ರನ್ಗಳಿಸಿದರು.
ದಕ್ಷಿಣ ಅಫ್ರಿಕಾ ಪರ ಎನ್ರಿಚ್ ನೋಕಿಯಾ 4 ಓವರ್‌ಗಳಲ್ಲಿ 7 ರನ್ ನೀಡಿದ 4 ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ 22ಕ್ಕೆ 2, ಕಗಿಸೋ ರಬಾಡ 21ಕ್ಕೆ 2 ಹಾಗೂ ಬಾರ್ಟ್ಮನ್ 9ಕ್ಕೆ 1 ವಿಕೆಟ್ ಪಡೆದರು.
ಟಿ20 ಕ್ರಿಕೆಟ್ನ ಕನಿಷ್ಠ ಮೊತ್ತ
ತನ್ನ ಮೊದಲ ಲೀಗ್ ಪಂದ್ಯದಲ್ಲಿ ಕೇವಲ 77 ರನ್ಗಳಿಗೆ ಆಲೌಟ್ ಆಗುವ ಮೂಲಕ ಶ್ರೀಲಂಕಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ತನ್ನ ಕನಿಷ್ಠ ಮೊತ್ತ ದಾಖಲಿಸಿತು. 2012 ರ ಚಾಂಪಿಯನ್ ಆಗಿರುವ ಶ್ರೀಲಂಕಾ ತಂಡ 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೇವಲ 87ಕ್ಕೆ ಆಲೌಟ್ ಆಗಿದ್ದು, ಈವರೆಗಿನ ಕನಿಷ್ಠ ಮೊತ್ತವಾಗಿತ್ತು.