ಚಂಡೀಗಢ: ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ, ಬೌಲರ್‌ಗಳ ಹೀನಾಯ ಪ್ರದರ್ಶನದಿಂದ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ಹೀನಾಯ ಸೋಲು ಕಂಡಿದೆ. ಮೊದಲ ಪಂದ್ಯದಲ್ಲಿ 101 ರನ್‌ಗಳ ಭರ್ಜರಿ ಜಯ ಸಾಧಿಸಿದ್ದ ಭಾರತ, 2ನೇ ಪಂದ್ಯದಲ್ಲಿ 51 ರನ್‌ಗಳ ಸೋಲು ಕಂಡಿದೆ. ಈ ಮೂಲಕ ಸರಣಿ 1-1ರಲ್ಲಿ ಸಮಬಲಗೊಂಡಿದೆ.
ಇಲ್ಲಿನ ಮಲ್ಲನ್‌ಪುರ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಕ್ವಿಂಟನ್ ಡಿಕಾಕ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್ ನಷ್ಟಕ್ಕೆ 213 ರನ್ ಕಲೆಹಾಕಿತು. 214 ರನ್‌ಗಳ ಬೃಹತ್ ಗುರಿ ಪಡೆದ ಭಾರತ 19.1 ಓವರ್‌ಗಳಲ್ಲಿ 162 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ಆರಂಭದಲ್ಲೇ ಆಘಾತ
ಬೃಹತ್ ಚೇಸಿಂಗ್ ಪಡೆದ ಭಾರತ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ಉಪನಾಯಕ ಶುಭಮನ್ ಗಿಲ್ ಮೊದಲ ಓವರ್‌ನಲ್ಲಿ ತನ್ನ ಪಾಲಿನ ಮೊದಲ ಎಸೆತಕ್ಕೆ ವಿಕೆಟ್ ಒಪ್ಪಿಸಿ ಹೊರನಡೆದರು. ಇನ್ನೂ ಸ್ಫೋಟಕ ಪ್ರದರ್ಶನಕ್ಕಿಳಿದ ಅಭಿಷೇಕ್ ಶರ್ಮಾ ಕೂಡ 8 ಎಸೆತಗಳಲ್ಲಿ 17 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಈ ಬೆನ್ನಲ್ಲೇ ನಾಯಕ ಸೂರ್ಯಕುಮಾರ್ ಯಾದವ್ ಕೇವಲ 5 ರನ್ ಗಳಿಸಿ ಔಟಾದರು. ಹೀಗಾಗ ಪವರ್ ಪ್ಲೇನಲ್ಲೇ ಭಾರತ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತ್ತು. ಆ ಬಳಿಕ ನಿಧಾನಗತಿಯಲ್ಲಿ ರನ್ ಕಲೆಹಾಕುತ್ತಿದ್ದ ಅಕ್ಷರ್ ಪಟೇಲ್ ಕೂಡ ಕ್ಯಾಚ್ ನೀಡಿ ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ- ತಿಲಕ್ ವರ್ಮಾ ಜೋಡಿ ಸಣ್ಣ ಪ್ರಮಾಣದ ಜೊತೆಯಾಟ ನೀಡಿದರು. ಮೊದಲ 10 ಓವರ್‌ಗಳಲ್ಲಿನ ಹಿನ್ನಡೆಯಿಂದ ಭಾರತ ಹೀನಾಯ ಸೋಲಿಗೆ ತುತ್ತಾಯಿತು. ಟೀಂ ಇಂಡಿಯಾ ಪರ ಏಕಾಂಗಿ ಹೋರಾಟ ನಡೆಸಿದ ತಿಲಕ್ ವರ್ಮಾ 34 ಎಸೆತಗಳಲ್ಲಿ 62 ರನ್ ಗಳಿಸಿದ್ರೆ, ಹಾರ್ದಿಕ್ ಪಾಂಡ್ಯ 20 ರನ್, ಜಿತೇಶ್ ಶರ್ಮಾ 27 ರನ್, ಅಕ್ಷರ್ ಪಡೇಲ್ 21 ರನ್ ಕೊಡುಗೆ ನೀಡಿದರು.
ಕೆಟ್ಟ ದಾಖಲೆ ಬರೆದ ಅರ್ಷ್‌ದೀಪ್
ಟಾಸ್ ಗೆದ್ದು ಫೀಲ್ಡಿಗಿಳಿದ ಭಾರತ ನಿರೀಕ್ಷೆಗೆ ತಕ್ಕಂತೆ ಬೌಲಿಂಗ್ ನಡೆಸಲೇ ಇಲ್ಲ. ಅದರಲ್ಲೂ ಟಿ20 ಕ್ರಿಕೆಟ್‌ನ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿರುವ ಅರ್ಷ್‌ದೀಪ್ ಸಿಂಗ್ ಬೇಕಾಬಿಟ್ಟಿ ವೈಡ್ ಎಸೆದು ತೀವ್ರ ಮುಜುಗರಕ್ಕೀಡಾದರು. ಸಾಮಾನ್ಯವಾಗಿ ತಮ್ಮ ನಿಖರವಾದ ಯಾರ್ಕರ್ ಮತ್ತು ಸ್ವಿಂಗ್ ಬೌಲಿಂಗ್‌ಗೆ ಹೆಸರಾಗಿರುವ ಅವರು ಇನಿಂಗ್ಸ್‌ನ 11ನೇ ಓವರ್‌ನಲ್ಲಿ ನಿಯಂತ್ರಣ ಕಳೆದುಕೊಂಡಂತೆ ಕಂಡುಬಂದರು. ಅವರು ಎಸೆದ 11ನೇ ಓವರ್ ನಲ್ಲಿ 18 ರನ್ ಹರಿದು ಬಂತು. 11ನೇ ಓವರ್ (10.1) ಎಸೆಯಲು ಬಂದ ಅರ್ಶದೀಪ್ ಸಿಂಗ್ ಅವರ ಮೊದಲ ಎಸೆತವನ್ನೇ ಕ್ವಿಂಟನ್ ಡಿ ಕಾಕ್ ಅವರು ಸೈಟ್ ಸ್ಕ್ರೀನ್‌ಗೆ ಅಪ್ಪಳಿಸುವಂತೆ ಸಿಕ್ಸರ್ ಬಾರಿಸಿದರು. ಈ ಹೊಡೆತದ ನಂತರ ಬೌಲರ್ ಅರ್ಷ್‌ದೀಪ್ ಸಂಪೂರ್ಣ ಒತ್ತಡಕ್ಕೆ ಒಳಗಾದಂತೆ ಕಂಡುಬಂದರು. ಇದಾದ ಬಳಿಕ ನಡೆದದ್ದು ಮಾತ್ರ ಮೈದಾನದಲ್ಲಿದ್ದವರನ್ನ ಅಚ್ಚರಿಗೆ ತಳ್ಳಿತು. ಎರಡನೇ ಎಸೆತದಿಂದಲೇ ಅರ್ಷ್‌ದೀಪ್ ಲಯ ತಪ್ಪಿದರು. ಆಫ್ ಸ್ಟಂಪ್‌ಗಿಂತ ತೀರಾ ಆಚೆಗೆ ಚೆಂಡನ್ನು ಎಸೆಯುವ ಮೂಲಕ ಸತತ ವೈಡ್‌ಗಳನ್ನು ಎದುರಾಳಿ ತಂಡಕ್ಕೆ ಕೊಡುಗೆಯಾಗಿ ನೀಡಿದರು. ಇದು ಎಷ್ಟರ ಮಟ್ಟಿಗೆ ಮುಂದುವರಿಯಿತು ಎಂದರೆ 3ನೇ ಎಸೆತವನ್ನು ಪೂರ್ಣಗೊಳಿಸಲು ಅವರು ಬರೋಬ್ಬರಿ 5 ಬಾರಿ ಬೌಲಿಂಗ್ ಮಾಡಬೇಕಾಯಿತು.
ಆಫ್ ಸೈಡ್‌ನಲ್ಲಿ ವೈಡ್ ಯಾರ್ಕರ್ ಹಾಕಲು ಪ್ರಯತ್ನಿಸಿ ವಿಫಲರಾದ ಸಿಂಗ್, ಸತತವಾಗಿ ವೈಡ್ ಲೈನ್ ದಾಟಿದರು. ಇದನ್ನು ಕಂಡ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಕೂಡ ಗಂಭೀರವಾಗಿ ತಲೆಕೆಡಿಸಿಕೊಂಡಂತೆ ಕಂಡುಬಂದರು. ಅಂತಿಮವಾಗಿ 10.6ನೇ ಎಸೆತದಲ್ಲಿಯೂ ಲೆಗ್ ಸೈಡ್‌ಗೆ ವೈಡ್ ಹಾಕುವ ಮೂಲಕ, ಒಂದೇ ಓವರ್‌ನಲ್ಲಿ ಒಟ್ಟು 7 ವೈಡ್‌ಗಳನ್ನ ಎಸೆದರು.
22 ರನ್ ಎಕ್ಸ್ಟ್ರಾ
ಭಾರತ ತಂಡ ಇತರೆ ರನ್ ಗಳ ರೂಪದಲ್ಲಿ 22 ರನ್ ಬಿಟ್ಟುಕೊಟ್ಟಿತು. ಅದರಲ್ಲಿ ಒಂದು ಬೈ, 5 ಲೈಗ್ ಬೈ, 16 ವೈಡ್ ಗಳಿದ್ದವು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿಕಾಕ್ ಸ್ಫೋಟಕ 90 ರನ್ (46 ಎಸೆತ, 7 ಸಿಕ್ಸ್, 5 ಬೌಂಡರಿ), ಡೊನಿವಾನ್ ಫೆರೇರಾ ಸ್ಫೋಟಕ 30 ರನ್ (16 ಎಸೆತ, 3 ಸಿಕ್ಸ್, 1 ಬೌಂಡರಿ), ಏಡನ್ ಮಾರ್ಕ್ರಂ 29 ರನ್, ಬ್ರೇವಿಸ್ 14 ರನ್, ರೀಝಾ ಹೆನ್‌ಡ್ರಿಕ್ಸ್ 8 ರನ್ ಗಳಿಸಿದ್ರೆ, ಡೇವಿಡ್ ಮಿಲ್ಲರ್ ಅಜೇಯ 20 ರನ್ ಗಳಿಸಿದರು.




