ಸಿಕ್ಸರ್‌, ಬೌಂಡರಿ ಆಟದಲ್ಲಿ 16 ರನ್‌ಗಳ ಜಯ – ಸರಣಿ ಗೆದ್ದ ಟೀಂ ಇಂಡಿಯಾ

Advertisements

– ಸೂರ್ಯ ಸ್ಫೋಟಕ ಅರ್ಧ ಶತಕ
– ಡೇವಿಡ್‌ ಮಿಲ್ಲರ್‌ ಸ್ಫೋಟಕ ಶತಕ

ಗುವಾಹಟಿ: ಸಿಕ್ಸರ್‌, ಬೌಂಡರಿಗಳ ಆಟದಲ್ಲಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ ಭಾರತ 16 ರನ್‌ ಗಳಿಂದ ಗೆದ್ದು ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.

Advertisements

ಗೆಲ್ಲಲು 238 ರನ್‌ಗಳ ಕಠಿಣ ಗುರಿಯನ್ನು ಪಡೆದ ದಕ್ಷಿಣ ಆಫ್ರಿಕಾ 20 ಓವರ್‌ ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 221 ರನ್‌ ಗಳಿಸಿತು. ಈ ಪಂದ್ಯದಲ್ಲಿ ಒಟ್ಟು 40 ಬೌಂಡರಿ ಸಿಡಿದರೆ 28 ಸಿಕ್ಸ್‌ ಸಿಡಿಸಲ್ಪಟ್ಟಿತ್ತು. ಭಾರತದ ಪರ 25 ಬೌಂಡರಿ 13 ಸಿಕ್ಸ್‌ ದಾಖಲಾದರೆ ದಕ್ಷಿಣ ಆಫ್ರಿಕಾದ ಪರ 15 ಬೌಂಡರಿ 12 ಸಿಕ್ಸ್‌ ದಾಖಲಾಗಿದೆ.

Advertisements

6.2 ಓವರ್‌ಗೆ 47 ರನ್‌ ಗಳಿಸಿ ಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ದಕ್ಷಿಣ ಆಫ್ರಿಕಾ ಪರ ಡೇವಿಡ್‌ ಮಿಲ್ಲರ್‌ (Devid Miller) ಮತ್ತು ಕ್ವಿಂಟನ್‌ ಡಿ ಕಾಕ್‌ (Quinton DeKock) ಮುರಿಯದ ನಾಲ್ಕನೇ ವಿಕೆಟ್‌ಗೆ 84 ಎಸೆತಗಳಲ್ಲಿ 174 ರನ್‌ ಜೊತೆಯಾಟವಾಡಿ ಗೆಲುವಿನ ಹತ್ತಿರ ತಂದರು.

ದಕ್ಷಿಣ ಆಫ್ರಿಕಾಕ್ಕೆ ಆರಂಭದಲ್ಲೇ ಬೌಲರ್‌ಗಳು ಆಘಾತ ನೀಡಿದರು. ತಂಡದ ನಾಯಕ ಟೆಂಬಾ ಬವುಮಾ ಹಾಗೂ ರಿಲೀ ರೊಸೊವ್ 2ನೇ ಓವರ್‌ನಲ್ಲೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಸೇರಿದರು.

Advertisements

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಐಡೆನ್ ಮಾಕ್ರಮ್‌ (Aiden Markram) 19 ಎಸೆತಗಳಲ್ಲಿ 1 ಸಿಕ್ಸರ್‌, 4 ಬೌಂಡರಿಯೊಂದಿಗೆ 33 ರನ್‌ ಪೇರಿಸಿದರು. ಇವರ ಸ್ಫೋಟಕ ಬ್ಯಾಟಿಂಗ್‌ನಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಇದಕ್ಕೆ ಅಕ್ಷರ್‌ ಪಟೇಲ್‌ ಬ್ರೇಕ್‌ ಹಾಕಿ, ಮಾಕ್ರಮ್‌ಗೆ ಪೆವಿಲಿಯನ್‌ ದಾರಿ ತೋರಿದರು.

ನಂತರ ಒಂದಾದ ಕ್ವಿಂಟನ್‌ ಡಿಕಾಕ್‌ ಹಾಗೂ ಡೇವಿಡ್‌ ಮಿಲ್ಲರ್‌ ಉತ್ತಮ ಜೊತೆಯಾಟವಾಡಿದರು. ಈ ವೇಳೆ ಕ್ವಿಂಟನ್‌ ಡಿಕಾಕ್‌ 67 ಎಸೆತಗಳಲ್ಲಿ 63 ರನ್‌ (3 ಬೌಂಡರಿ, 3 ಸಿಕ್ಸರ್‌) ಸಿಡಿಸಿದರೆ. ಸ್ಫೋಟಕ ಶತಕ ಸಿಡಿಸಿದ ಡೇವಿಡ್‌ ಮಿಲ್ಲರ್‌ ಕೇವಲ 47 ಎಸೆತಗಳಲ್ಲಿ 106 ರನ್‌ (7 ಸಿಕ್ಸರ್‌, 8 ಬೌಂಡರಿ) ಚಚ್ಚಿ ಅಜೇಯರಾಗುಳಿಸಿದರು.

ಟೀಂ ಇಂಡಿಯಾ ಪರ ಅಕ್ಷರ್‌ ಪಟೇಲ್‌ 1 ವಿಕೆಟ್‌, ಅರ್ಷ್‌ದೀಪ್‌ ಸಿಂಗ್‌ 2 ವಿಕೆಟ್‌ ಕಬಳಿಸಿದರು.

ಸ್ಫೋಟಕ ಬ್ಯಾಟಿಂಗ್‌:
ನಾಯಕ ರೋಹಿತ್ ಶರ್ಮಾ ಮತ್ತು ಕೆಎಲ್‌ ರಾಹುಲ್ (KL Rahul) ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ರೋಹಿತ್ ಶರ್ಮಾ (Rohit Sharma) 37 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್ ಸಹಿತ 43 ರನ್ ಗಳಿಸಿದರೆ, ಉಪನಾಯಕ ಕೆ.ಎಲ್.ರಾಹುಲ್ 28 ಎಸೆತಗಳಲ್ಲಿ ಸ್ಫೋಟಕ 57 ರನ್ ಗಳಿಸಿ ಶುಭಾರಂಭ ನೀಡಿದರು. ಮೊದಲ ವಿಕೆಟ್‌ಗೆ ರೋಹಿತ್‌, ರಾಹುಲ್‌ ಜೋಡಿ 96 ರನ್‌ಗಳನ್ನು ಕಲೆಹಾಕಿತು.

ಸೂರ್ಯಶೈನ್‌, ರಾಹುಲ್‌ ರಾಕ್‌:
ಕಳೆದ ಪಂದ್ಯದಲ್ಲಿ ನಿಧಾನಗತಿಯ ಬ್ಯಾಟಿಂಗ್‌ ನಿಂದ ಟೀಕೆಗಳಿಗೆ ಗುರಿಯಾಗಿದ್ದ ಕೆ.ಎಲ್.ರಾಹುಲ್‌ ಬ್ಯಾಟ್‌ ಮೂಲಕ ಟೀಕಾಕಾರಿಗೆ ಉತ್ತರ ಕೊಟ್ಟಿದ್ದಾರೆ. ಕೇವಲ 28 ಎಸೆತಗಳಲ್ಲಿ 200 ಸ್ಟ್ರೈಕ್‌ ರೇಟ್‌ನಲ್ಲಿ 57 ರನ್‌ (4 ಸಿಕ್ಸರ್‌, 5 ಬೌಂಡರಿ) ಪೂರೈಸಿದರು.

ಇತ್ತ ರಾಹುಲ್‌ ನಿರ್ಗಮಿಸುತ್ತಿದ್ದಂತೆಯೇ ಕ್ರೀಸ್‌ಗಿಳಿದ ಸ್ಫೋಟಕ ಬ್ಯಾಟ್ಸ್‌ಮನ್‌ ಸೂರ್ಯಕುಮಾರ್‌ ಯಾದವ್‌ (Suryakumar Yadav) ಸಿಕ್ಸ್‌- ಫೋರ್‌ಗಳ ಭರ್ಜರಿ ಬ್ಯಾಟಿಂಗ್‌ ಮೂಲಕ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿ, ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. 22 ಎಸೆತಗಳಲ್ಲಿ 61 ರನ್‌ (5 ಬೌಂಡರಿ, 5 ಸಿಕ್ಸರ್‌)ಗಳ ಚಚ್ಚಿದರು. ತಮ್ಮ ಆರ್ಭಟ ಮುಂದುವರಿಸುತ್ತಿರುವಾಗಲೇ ರನೌಟ್‌ ಆಗುವ ಮೂಲಕ ನಿರಾಸೆ ಅನುಭವಿಸಿದರು.

ಕೊಹ್ಲಿಗೆ ನಿರಾಸೆ:
ನಿಧಾನಗತಿಯಲ್ಲೇ ಬ್ಯಾಟಿಂಗ್‌ ಆರಂಭಿಸಿದರೂ ಅಂತಿಮ ಓವರ್‌ವರೆಗೂ ಕ್ರೀಸ್‌ನಲ್ಲಿ ಆರ್ಭಟಿಸಿದ ಕೊಹ್ಲಿ (Virat kohli) ಅರ್ಧ ಶತಕದಿಂದ ವಂಚಿತರಾದರು. 28 ಎಸೆತಗಳನ್ನು ಎದುರಿಸಿದ ಕೊಹ್ಲಿ 7 ಬೌಂಡರಿ 1 ಸಿಕ್ಸರ್ ನೆರವಿನಿಂದ 49 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮ ದಿನೇಶ್‌ ಕಾರ್ತಿಕ್‌ 7 ಎಸೆತಗಳಲ್ಲಿ 2 ಸಿಕ್ಸರ್, 2 ಬೌಂಡರಿಯೊಂದಿಗೆ 17 ರನ್‌ ಹೊಡೆದರು. ಕೇಶವ್ ಮಹಾರಾಜ್ 2 ವಿಕೆಟ್‌ ಪಡೆದರೆ, ಅನ್ರಿಚ್ ನಾರ್ಟ್ಜೆ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.

ಭಾರತದ ರನ್‌ ಏರಿದ್ದು ಹೇಗೆ?
63 ಎಸೆತ 100 ರನ್‌
90 ಎಸೆತ 150 ರನ್‌
106 ಎಸೆತ 200 ರನ್‌
120 ಎಸೆತೆ 237 ರನ್‌

Live Tv

Advertisements
Exit mobile version