ಬೆಂಗಳೂರು: ಜಾತಿ ಜನಗಣತಿ ಜೇನುಗೂಡಿಗೆ ಮತ್ತೆ ಕೈ ಹಾಕಿರೋ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮುಂದಿನ ಸೋಮವಾರದಿಂದ ಆರಂಭವಾಗಬೇಕಿದ್ದ ಗಣತಿ ಸದ್ಯಕ್ಕೆ ಮುಂದೂಡಿಕೆ ಆಗಿದೆ. ಜಾತಿ ಜನಗಣತಿಗೆ ಸಂಪುಟ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಸಚಿವರ ವಿಶೇಷ ಸಭೆ ನಡೆಸಲಾಯ್ತು.
ಸಭೆ ಬಳಿಕ ಜಾತಿಗಣತಿಯನ್ನು ಸದ್ಯಕ್ಕೆ ಮುಂದೂಡಲು ಸಿಎಂಗೆ ಶಿಫಾರಸು ಮಾಡಲು ನಿರ್ಧರಿಸಲಾಗಿದೆ. ಇನ್ನು, ಇದಕ್ಕೂ ಮುನ್ನ, ಹೊಸದಾಗಿ 331 ಜಾತಿಗಳ ಸೇರ್ಪಡೆಗೆ ಆಕ್ಷೇಪ ವ್ಯಕ್ತವಾಗಿದ್ದು, ಸಂಪುಟ ಸಭೆಯಲ್ಲಿ ಏರುಧ್ವನಿಯಲ್ಲಿ ಚರ್ಚೆ ಆಗಿದೆ ಎನ್ನಲಾಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಸಹಿತ 20ಕ್ಕೂ ಹೆಚ್ಚು ಸಚಿವರು ಜಾತಿಗಣತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕೆಲವು ಸಚಿವರು ಮಾತನಾಡಿ, ಜಾತಿಗಣತಿಯಲ್ಲಿ ಹಲವು ಗೊಂದಲಗಳು ಇವೆ, ಗೊಂದಲಗಳನ್ನ ಸರಿಪಡಿಸದ ಹೊರತು ಜಾತಿಗಣತಿ ಬೇಡ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಂತಾ ಜನರಿಗೆ ಮನವರಿಕೆ ಮಾಡಿ ಕೊಡಲು ಆಗುತ್ತಾ..? ಅಂತ ಆಕ್ಷೇಪ ಎತ್ತಿದ್ದಾರೆ. ಅದರಲ್ಲೂ ಲಿಂಗಾಯತ ಸಚಿವರಾದ ಎಂಬಿ ಪಾಟೀಲ್ ಆಕ್ರೋಶಕ್ಕೆ ಸಿಎಂ ದಂಗಾಗಿ ಹೋಗಿದ್ದಾರೆ. ಇನ್ನು, ಸಿಎಂ ಸಿದ್ದರಾಮಯ್ಯ ಗಣತಿ ಸಮರ್ಥಿಸಿಕೊಂಡರೂ, ಒಮ್ಮತದ ತೀರ್ಮಾನ ಕೈಗೊಳ್ಳಲು ಸಚಿವರ ವಿಶೇಷ ಸಭೆ ನಡೆಸಲಾಯಿತು.
ಜೋರು ಜಟಾಪಟಿ
ಅಲ್ಲದೇ ಸಂಪುಟ ಸಭೆಯಲ್ಲಿ ಜೋರು ಜಟಾಪಟಿ ನಡೆದಿತ್ತು. 331 ಹೊಸದಾಗಿ ಜಾತಿಗಳ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಸಚಿವರು, ಜಾತಿಗಣತಿಯಿಂದ ಸರ್ಕಾರಕ್ಕೆ ಯಾವುದೇ ಹಾನಿಯಾಗಬಾರದು. ಹೊಸ ಜಾತಿಗಳ ಸೇರ್ಪಡೆಯಿಂದ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲವನ್ನು ಸರಿಪಡಿಸದ ಹೊರತು ಜಾತಿಗಣತಿ ಬೇಡ ಎಂದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಂತಾ ಜನರಿಗೆ ಮನವರಿಕೆ ಮಾಡಿ ಕೊಡಲು ಸಾಧ್ಯವಿದ್ಯಾ ಎಂದು ಪ್ರಶ್ನಿಸಿದ್ದಾರೆ. ಜಾತಿಗಣತಿ ಮುಂದೂಡುವಂತೆ ಡಿಕೆಶಿ ಸೇರಿದಂತೆ 20ಕ್ಕೂ ಹೆಚ್ಚು ಸಚಿವರು ಹೇಳಿದ್ದಾರೆ. 5ಕ್ಕೂ ಹೆಚ್ಚು ಸಚಿವರು ಗಣತಿ ಪರ ಇದ್ದರೆ ಉಳಿದ ಸಚಿವರು ತಟಸ್ಥರಾಗಿದ್ದರು. ಎಲ್ಲವನ್ನೂ ಕೇಳಿಸಿಕೊಂಡ ಸಿಎಂ, ಜಾತಿಗಣತಿ ಮಾಡಲಿ, ಮಾಡದೇ ಇರಲಿ ಪರ ವಿರೋಧ ಅಭಿಪ್ರಾಯ ಬರುತ್ತದೆ. ಜಾತಿ ಗಣತಿ ನಡೆದ್ರೆ ಮೇಲ್ವರ್ಗದ ವಿರೋಧಿ ಎನ್ನುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಭೆಯ ಕೊನೆಯಲ್ಲಿ ಜಾತಿಗಣತಿಯ ಬಗ್ಗೆ ಸಭೆಯಲ್ಲಿ ಮಾತನಾಡಿದ ಸಚಿವರುಗಳಿಗೆ ನೀವೇ ಒಂದು ವಿಶೇಷ ಸಭೆ ನಡೆಸಿ ಎಂದು ಸೂಚಿಸಿದರು.
ಮರುಸಮೀಕ್ಷೆ ದಿನಾಂಕ ಘೋಷಿಸಿದ್ದ ಸಿಎಂ
ಹಿಂದುಳಿದ ವರ್ಗಗಳ ಆಯೋಗದ ನೇತೃತ್ವದಲ್ಲಿ ಹೊಸದಾಗಿ ಜಾತಿ ಜನಗಣತಿ ನಡೆಸಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರ ವರೆಗೆ ಮಧುಸೂದನ್ ನಾಯಕ್ ಸಮಿತಿ ನೇತೃತ್ವದಲ್ಲಿ ಸಮೀಕ್ಷೆ ನಡೆಯಲಿದೆ ಎಂದು ಇತ್ತೀಚೆಗೆ ಸಿಎಂ ಘೋಷಿಸಿದ್ದರು. ಮರು ಸಮೀಕ್ಷೆಗೆ ಸದ್ಯ 420 ಕೋಟಿ ರೂ. ಖರ್ಚಾಗಲಿದ್ದು, ಅಗತ್ಯಬಿದ್ದರೆ ಹೆಚ್ಚಿನ ಅನುದಾನ ನೀಡುವುದಾಗಿಯೂ ಸಿದ್ದರಾಮಯ್ಯ ಘೋಷಿಸಿದ್ದರು. ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸುವ ಉದ್ದೇಶದಿಂದ ಈ ಗಣತಿ ಮುಖ್ಯವಾಗಿದ್ದು, ಎಲ್ಲಾ ನಾಗರಿಕರೂ ಪಾಲ್ಗೊಳ್ಳಬೇಕು, ಸಮೀಕ್ಷೆಯಲ್ಲಿ ಕೇಳುವ 60 ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದರು.