ನವದೆಹಲಿ: ಸೌರವ್ ಗಂಗೂಲಿ ತ್ಯಾಗಮಾಡಿ ಅವಕಾಶ ನೀಡದೇ ಇದ್ದಲ್ಲಿ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಶ್ರೇಷ್ಠ ಆಟಗಾರನಾಗಿ ಹೊರ ಹೊಮ್ಮುತ್ತಿರಲಿಲ್ಲ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಶನಿವಾರ ಖಾಸಗಿ ವಾಹಿನಿಯ ಸಂದರ್ಶನದ ವೇಳೆ ಮಾತನಾಡಿದ ಸೆಹ್ವಾಗ್, 2004ರಲ್ಲಿ ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗಿದ್ದ ವೇಳೆ ಧೋನಿ ಟೀಂ ಇಂಡಿಯಾಕ್ಕೆ ಸೇರಿದ್ದರು. ಒಂದೇ ವರ್ಷದಲ್ಲಿ ಧೋನಿ ಪಾಕಿಸ್ತಾನದ ವಿರುದ್ಧ 148 ಮತ್ತು ಶ್ರೀಲಂಕಾ ವಿರುದ್ಧ 183 ರನ್ ಬಾರಿಸಿ ಉತ್ತಮ ಪ್ರದರ್ಶನ ನೀಡಿದ್ದರು. ಅಂದು 3ನೇ ಕ್ರಮಾಂಕವನ್ನು ಸೌರವ್ ತ್ಯಾಗ ಮಾಡಿ ಅವಕಾಶ ನೀಡಿದ ಕಾರಣ ಧೋನಿ ಇಂದು ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದಾರೆ ಎಂದರು.
Advertisement
Advertisement
ದಾದಾ ಯಾವಾಗಲೂ ಹೊಸತನ್ನ ಬಯಸುವ ನಾಯಕರಾಗಿದ್ದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ನಾನಾ ಬದಲಾವಣೆ ಮಾಡಿ ತಂಡದ ಗೆಲುವಿಗೆ ಶ್ರಮಿಸುತ್ತಿದ್ದರು. ನಾನು ಆರಂಭಿಕನಾಗಿ ಕ್ರೀಸ್‍ಗೆ ಇಳಿದರೆ ನಾಯಕರಾಗಿ 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬರುತ್ತಿದ್ದರು. ಒಂದು ವೇಳೆ ಸ್ಕೋರ್ ಕಡಿಮೆ ಇದ್ದಾಗ ಪಿಂಚ್ ಹಿಟ್ಟರ್ ಇರ್ಫಾನ್ ಪಠಾಣ್ ಅಥವಾ ಧೋನಿಯನ್ನು ಕಣಕ್ಕಿಳಿಸಿ ಸ್ಕೋರ್ ಹೆಚ್ಚಿಸುವತ್ತ ಗಮನ ಹರಿಸುತ್ತಿದ್ದರು ಎಂದು ಅಂದಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
Advertisement
http://www.youtube.com/watch?v=d3lNdHi5wyY
Advertisement
ಭಾರತದ ಕೆಲವು ಶ್ರೇಷ್ಠ ನಾಯಕರಲ್ಲಿ ಸೌರವ್ ಗಂಗೂಲಿ ಕೂಡ ಒಬ್ಬರು. ಅಂತಹ ಶ್ರೇಷ್ಠ ನಾಯಕ ನನಗೆ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ನೀಡುತ್ತಿದ್ದರು. ಅಲ್ಲದೇ ಮೂರು ನಾಲ್ಕು ಪಂದ್ಯಗಳಲ್ಲಿ 3ನೇ ಕ್ರಮಾಂಕದಲ್ಲಿ ಆಡಬೇಕಿದ್ದ ಸೌರವ್ ತ್ಯಾಗ ಮಾಡಿ ಧೋನಿಗೆ ಅವಕಾಶ ನೀಡಿದ್ದರು. ಯಾವಾಗಲೂ ಹೊಸಬರ ಮೇಲೆ ನಂಬಿಕೆ ಇಟ್ಟು ಪ್ರೋತ್ಸಾಹ ನೀಡುತ್ತಿದ್ದ ಸೌರವ್, ಧೋನಿಗೂ ಸಹ ಉತ್ತಮ ಅವಕಾಶ ನೀಡಿದ್ದರು ಎಂದು ತಿಳಿಸಿದರು.
ದಾದಾ ನಂತರ ರಾಹುಲ್ ದ್ರಾವಿಡ್ ಸಮಯದಲ್ಲೂ ಕೂಡ ಧೋನಿ ಬೆಸ್ಟ್ ಫಿನಿಷರ್ ಆಗಿ ಹೊರಹೊಮ್ಮಿದರು. ಅಲ್ಲದೇ ಯುವರಾಜ್ ಮತ್ತು ಧೋನಿ ಜೊತೆಯಾಟವು ಒಂದು ಉತ್ತಮವಾಗಿತ್ತು ಎಂದು ಸೆಹ್ವಾಗ್ ಸ್ಮರಿಸಿದರು.