ನವದೆಹಲಿ: ಬಹುನಿರೀಕ್ಷಿತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮುರಳಿ ವಿಜಯ್ ಜೊತೆ ಕೆಎಲ್ ರಾಹುಲ್ ಆರಂಭಿಕ ಬ್ಯಾಟ್ಸ್ ಮನ್ ಆಗಿ ಕಣಕ್ಕೆ ಇಳಿಯಬೇಕೆಂದು ಎಂದು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.
ಸದ್ಯ ತಂಡದ ಆರಂಭಿಕರಾಗಿರುವ ಶಿಖರ್ ಧವನ್ ಏಕದಿನ ಮಾದರಿಗೆ ಹೆಚ್ಚು ಸೂಕ್ತವಾಗಿದ್ದು, ಟೆಸ್ಟ್ ನಲ್ಲಿ ಉತ್ತಮ ದಾಖಲೆಯನ್ನು ಹೊಂದಿಲ್ಲ. ಈ ಹಿಂದಿನ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಹಾಗೂ ಇಂಗ್ಲೆಂಡ್ ವಿರುದ್ಧದ ಟೂರ್ನಿಗಳಲ್ಲಿ ಧವನ್ ಸಾಕಷ್ಟು ಹೆಣಗಾಡಿದ್ದಾರೆ. ಅದ್ದರಿಂದ ನಾನು ಇಂಗ್ಲೆಂಡ್ ಟೆಸ್ಟ್ ಸರಣಿಯ ಆರಂಭಿಕರಾಗಿ ಮುರಳಿ ವಿಜಯ್, ಕೆಎಲ್ ರಾಹುಲ್ ಜೋಡಿಯನ್ನು ಆಯ್ಕೆ ಮಾಡುತ್ತೇನೆ ಎಂದಿದ್ದಾರೆ.
ಶಿಖರ್ ಧವನ್ ತವರಿನಲ್ಲಿ ಆಡಿರುವ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಸದ್ಯ ತಂಡದ ಆಡಳಿತ ಮಂಡಳಿ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ ಎಂದು ಗಂಗೂಲಿ ಹೇಳಿದರು.
ಸದ್ಯ ಮಾಧ್ಯಮ ಕ್ರಮಾಂಕದಲ್ಲಿಯೂ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿರುವುದರಿಂದ ಚೇತೇಶ್ವರ ಪೂಜಾರ ಸ್ಥಾನದಲ್ಲಿ ರಾಹುಲ್‍ರನ್ನು ಕಣಕ್ಕೆ ಇಳಿಸಬೇಕೆಂಬ ಚರ್ಚೆ ಕ್ರಿಕೆಟ್ ವಿಮರ್ಶಕರಿಂದ ಕೇಳಿಬಂದಿದೆ. ಈ ಕುರಿತು ಖಾಸಗಿ ಮಾಧ್ಯಮದೊಂದಿಗೆ ಶುಕ್ರವಾರ ತಮ್ಮ ಅಭಿಪ್ರಾಯ ಹಂಚಿಕೊಂಡ ಇಂಗ್ಲೆಂಡ್ ತಂಡದ ಮಾಜಿ ವೇಗಿ ಡ್ಯಾರೆನ್ ಗಫ್ ಇತ್ತೀಚಿನ ಪ್ರದರ್ಶನಗಳನ್ನು ಅವಲೋಕಿಸಿದರೆ ಪೂಜಾರ ಆಡುವ 11ರ ಬಳಗಕ್ಕೆ ಫಿಟ್ ಎಂದು ಕಾಣುತ್ತಿಲ್ಲ. ಈ ಸ್ಥಾನದಲ್ಲಿ ರಾಹುಲ್‍ಗೆ ಅವಕಾಶ ನೀಡುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಚೇತೇಶ್ವರ ಪೂಜಾರ ಟೆಸ್ಟ್ ಕ್ರಿಕೆಟ್‍ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದು, 50.34 ರ ಸರಾಸರಿ ಯಲ್ಲಿ 4,531 ರನ್ ಗಳಿಸಿದ್ದಾರೆ. ಆದರೆ ಇತ್ತೀಚೆಗೆ ಅವರು ಭಾಗವಹಿಸಿದ್ದ ಕೌಟಿ ಚಾಂಪಿಯನ್ ಶಿಪ್ ನಲ್ಲಿ 14.33 ಸರಾಸರಿಯಲ್ಲಿ ಕೇವಲ 172 ರನ್ ಮಾತ್ರ ಗಳಿಸಿ ನಿರಾಸೆ ಮೂಡಿಸಿದ್ದರು.
ಕೆಎಲ್ ರಾಹುಲ್ ಎಸ್ಸೆಕ್ಸ್ ತಂಡ ವಿರುದ್ಧ ನಡೆದ ಅಭ್ಯಾಸ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ 58 ರನ್ ಹಾಗೂ ಎರಡನೇ ಇನ್ನಿಂಗ್ಸ್ ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು ಅಜೇಯ 36 ರನ್ ಗಳಿಸಿ ಭರವಸೆ ಮೂಡಿಸಿದ್ದರು.