LatestLeading NewsMain PostNational

ಗಂಗೂಲಿ, ಅಮಿತ್ ಶಾ ಭೇಟಿ – ಬಿಜೆಪಿ ಸೇರ್ತಾರಾ ದಾದಾ?

ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮನೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿ ರಾತ್ರಿ ಭೋಜನ ಸವಿದು ಮಾತುಕತೆ ನಡೆಸಿದ್ದಾರೆ. ಈ ಮೂಲಕ ದಾದಾ ಬಿಜೆಪಿ ಪಕ್ಷ ಸೇರುತ್ತಾರೆಂಬ ಗುಸುಗುಸು ಮತ್ತೆ ಕೇಳಿಬಂದಿದೆ.

2 ದಿನಗಳ ಪಶ್ಚಿಮ ಬಂಗಾಳ ಪ್ರವಾಸ ಕೈಗೊಂಡಿರುವ ಅಮಿತ್ ಶಾ ಮತ್ತು ಬಿಜೆಪಿ ನಾಯಕರು ನಿನ್ನೆ ರಾತ್ರಿ ಗಂಗೂಲಿ ಮನೆಯಲ್ಲಿ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಭಾಗವಹಿಸಿ ಕೆಲ ಕಾಲ ಮಾತುಕತೆ ನಡೆಸಿದರು. ಆ ಬಳಿಕ ಇದೀಗ ಗಂಗೂಲಿ ಬಿಜೆಪಿ ಸೇರ್ಪಡೆಗೊಳ್ಳುವ ಬಗ್ಗೆ ಚರ್ಚೆ ಜೋರಾಗಿದೆ. ಇತ್ತ ಅಮಿತ್ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿರುವುದರಿಂದ ಕೋಲ್ಕತ್ತಾ ಭೇಟಿ ವೇಳೆ ಗಂಗೂಲಿ ಮನೆಗೆ ಸಹಜವಾಗಿಯೇ ಭೇಟಿ ಕೊಟ್ಟಿದ್ದಾರೆ ಎಂಬ ಮಾತು ಒಂದೆಡೆ ಹರಿದಾಡುತ್ತಿದೆ. ಇದನ್ನೂ ಓದಿ: ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಣೆ – 5 ವಾರಗಳಲ್ಲಿ ಎರಡನೇ ಬಾರಿ ಹೇರಿಕೆ

ಈ ಬಗ್ಗೆ ಭೋಜನ ಕೂಟದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೌರವ್ ಗಂಗೂಲಿ, ನಮ್ಮ ಭೇಟಿಯಲ್ಲಿ ರಾಜಕೀಯವಾಗಿ ಏನೂ ನಡೆದಿಲ್ಲ. ಹಲವು ವರ್ಷಗಳಿಂದ ನಾನು ಅಮಿತ್ ಶಾ ಅವರೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದು, ಈ ಹಿಂದೆ ಹಲವು ಬಾರಿ ಭೇಟಿಯಾಗಿದ್ದೇನೆ. ಕೋಲ್ಕತ್ತಾಗೆ ಭೇಟಿ ನೀಡಿದ ಕಾರಣ ಅಮಿತ್ ಶಾರನ್ನು ಮನೆಗೆ ಊಟಕ್ಕೆ ಆಹ್ವಾನಿಸಿದ್ದೆ ಹಾಗಾಗಿ ಬಂದಿದ್ದಾರೆ ಎಂದರು.

2015 ರಿಂದಲೂ ಬಂಗಾಳದಲ್ಲಿ ಗಂಗೂಲಿ ಬಿಜೆಪಿ ಪರವಾಗಿ ಚುನಾವಣೆಯ ಅಖಾಡಕ್ಕೆ ಧುಮುಕಳಿದ್ದಾರೆ. ದಾದಾ ಬಿಜೆಪಿ ಸೇರಿ ದೀದಿಗೆ ಟಕ್ಕರ್ ನೀಡಲಿದ್ದಾರೆ ಎಂಬ ಮಾತು ವ್ಯಾಪಕವಾಗಿ ಕೇಳಿಬರುತ್ತಿತ್ತು. 2021ರ ಬಂಗಾಳ ವಿಧಾನಸಭಾ ಚುನಾವಣೆಗೂ ಮೊದಲು ಗಂಗೂಲಿ ಬಿಜೆಪಿ ಸೇರಲಿದ್ದಾರೆ ಎಂದು ವರದಿಯಾಗಿತ್ತು. ಆ ಬಳಿಕ ಗಂಗೂಲಿಗೆ ಲಘು ಹೃದಯಾಘಾತವಾಯಿತು. ನಂತರ ರಾಜಕೀಯ ಪ್ರವೇಶಿಸುವ ಗಾಳಿಸುದ್ದಿಗೆ ಬ್ರೇಕ್ ಬಿದ್ದಿತ್ತು. ಇದನ್ನೂ ಓದಿ: ಮುಂಬೈ ತಂಡಕ್ಕೆ ರೋಚಕ ಜಯ – 3ನೇ ಸೋಲಿನ ಕಹಿ ಅನುಭವಿಸಿದ ಗುಜರಾತ್‌

ಇದೀಗ ಮತ್ತೆ ಗಂಗೂಲಿ ಮತ್ತು ಅಮಿತ್ ಶಾ ಭೇಟಿ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಗಂಗೂಲಿ ಬಿಜೆಪಿ ಸೇರುತ್ತಾರಾ ಎಂಬ ಪ್ರಶ್ನೆ ದಾದಾ ಅಭಿಮಾನಿಗಳಲ್ಲಿ ಎದ್ದಿದ್ದು ಇದಕ್ಕೆಲ್ಲ ಗಂಗೂಲಿಯೇ ಮುಂದಿನ ದಿನಗಳಲ್ಲಿ ಸೂಕ್ತ ಉತ್ತರ ಕೊಡಬೇಕಾಗಿದೆ.

 

Leave a Reply

Your email address will not be published.

Back to top button