ನವದೆಹಲಿ: ಪಂಚೆ ಹಾಕಿ ಬಂದ ರೈತನಿಗೆ ಜಿ.ಟಿ.ಮಾಲ್ (GT Mall) ಸಿಬ್ಬಂದಿ ಪ್ರವೇಶ ನಿರಾಕರಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಮಾಲ್ ಗಳಿಗೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಘೋಷಣೆ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಸರ್ಕಾರದ ಪರವಾಗಿ ಹೇಳಿಕೆ ನೀಡಿದ ಅವರು, ಮಾಲ್‌ಗಳಿಗೆ ನಾವು ಮಾರ್ಗಸೂಚಿ ತರುತ್ತೇವೆ. ಪಂಚೆ (Panche) ನಮ್ಮ ಸಂಸ್ಕೃತಿ. ಇಂತಹ ಘಟನೆಗಳು ಮತ್ತೆ ಆಗಬಾರದು ಎಂದು ಹೇಳಿದರು.
ಜಿ.ಟಿ.ಮಾಲ್ ತೆರಿಗೆ ಬಾಕಿ ಇತ್ತು. ಸ್ವಲ್ಪ ಕಟ್ಟಿದ್ದಾರೆ ಇನ್ನೂ ಬಾಕಿ ಇದೆ. ಚೆಕ್ ಕೊಟ್ಟಿದ್ದಾರೆ, ಇನ್ನೂ ತೆರಿಗೆ (Tax) ಬಾಕಿ ಇದೆ. ಸದ್ಯ ಜಿ.ಟಿ.ಮಾಲ್ ಮುಚ್ಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ – ಓರ್ವ ಯೋಧನಿಗೆ ಗಾಯ
ಈ ವೇಳೆ ಕೆಲ ಕ್ಲಬ್‌ಗಳಿಗೂ ಡ್ರೆಸ್ ಕೋಡ್ ಬಗ್ಗೆಯೂ ಕೂಡ ವಿಷಯ ಪ್ರಸ್ತಾಪಿಸಿದ ಕೆಲ ಶಾಸಕರು, ಕ್ಲಬ್ ಗಳಲ್ಲಿ ಕೂಡ ಪಂಚೆ ಚಪ್ಪಲಿ ಹಾಕಿಕೊಂಡು ಹೋದರೆ ಬಿಡಲ್ಲ ಎಂದು ಅಳಲು ವ್ಯಕ್ತಪಡಿಸಿದರು.
ಮಾಲ್ ಗಳಿಗೂ ಕ್ಲಬ್‌ಗಳಿಗೂ ಹೋಲಿಕೆ ಬೇಡ ಎಂದು ಹೆಚ್.ಕೆ.ಪಾಟೀಲ್ (HK Patel) ಸಲಹೆ ನೀಡಿದರು. ಈ ವೇಳೆ ಆರ್ ಅಶೋಕ್ (R Ashok) ಮಧ್ಯಪ್ರವೇಶ ಮಾಡಿ, ಕೇವಲ ಮಾರ್ಗಸೂಚಿ ಮಾಡಿದ್ರೆ ಸಾಲದು. ಲೈಸೆನ್ಸ್ ಕೊಡುವಾಗ ಷರತ್ತು ಹಾಕಿ ಕೊಡಿ. ಗ್ರಾಮೀಣ ಪ್ರದೇಶದ ಜನರಿಗೆ ಮುಕ್ತ ಅವಕಾಶ ಎಂದು ಷರತ್ತು ವಿಧಿಸಿ. ಆಗ ಅವರಿಗೆ ನೆನಪಿನಲ್ಲಿ ಉಳಿಯುತ್ತೆ ಎಂದು ಸಲಹೆ ನೀಡಿದರು.