Connect with us

Latest

ಇನ್ನು ಮುಂದೆ ವಿಮಾನದಲ್ಲೂ ವೈಫೈ ಬಳಸಬಹುದು

Published

on

– ಭಾರತದ ವಾಯುಪ್ರದೇಶ ವ್ಯಾಪ್ತಿಯಲ್ಲಿ ವೈಫೈ
– ನಾಗರಿಕ ವಿಮಾನಯಾನ ಸಚಿವಾಲಯದಿಂದ ಅನುಮತಿ

ನವದೆಹಲಿ: ಇನ್ನು ಮುಂದೆ ಭಾರತದ ವಾಯುಪ್ರದೇಶ ವ್ಯಾಪ್ತಿಯಲ್ಲಿ ಪ್ರಯಾಣಿಕರು ವಿಮಾನದಲ್ಲಿ ವೈಫೈ ಬಳಸಿಕೊಳ್ಳಬಹುದು.

ಇಲ್ಲಿಯವರೆಗೆ ಭಾರತದ ವಾಯುಸೀಮೆ ವ್ಯಾಪ್ತಿಯ ಸಂಚಾರದಲ್ಲಿ ವೈಫೈ ಬಳಕೆಗೆ ಅನುಮತಿ ಸಿಕ್ಕಿರಲಿಲ್ಲ. ಹಲವು ವರ್ಷಗಳಿಂದ ಈ ಸೇವೆ ಆರಂಭಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದ್ದರೂ ಭದ್ರತಾ ಕಾರಣಗಳಿಂದ ಸರ್ಕಾರ ಮೊಬೈಲ್ ಫೋನ್ ಮತ್ತು ಇಂಟರ್ ನೆಟ್ ಬಳಕೆಗೆ ಅನುಮತಿ ನೀಡಿರಲಿಲ್ಲ. ಆದರೆ ಈಗ ನಾಗರಿಕ ವಿಮಾನಯಾನ ಸಚಿವಾಲಯ ವೈಫೈ ಬಳಕೆಗೆ ಅನುಮತಿ ನೀಡಿದೆ.

ಫೆ.21 ರಂದು ಹೊರಡಿಸಲಾದ ಸುತ್ತೋಲೆಯಲ್ಲಿ ಸಚಿವಾಲಯ, ಪೈಲಟ್ ಅನುಮತಿ ನೀಡಿದರೆ ಪ್ರಯಾಣಿಕರು ಫ್ಲೈಟ್ ಮೊಡ್ ಅಥವಾ ಏರ್ ಪ್ಲೇನ್ ಮೊಡ್ ಹಾಕಿಕೊಂಡು ವಿಮಾನದಲ್ಲಿನ ವೈಫೈ ಸೇವೆ ಬಳಸಿಕೊಂಡು ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಸ್ಮಾರ್ಟ್ ವಾಚ್, ಇ- ರೀಡರ್ ಗಳನ್ನು ಬಳಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.

2018ರಲ್ಲಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಭಾರತದ ವಾಯುಪ್ರದೇಶ ವ್ಯಾಪ್ತಿಯಲ್ಲಿ ಹಾರಾಟ ನಡೆಸುತ್ತಿರುವ ವಿಮಾನದೊಳಗೆ ವೈಫೈ ಬಳಸಲು ಅನುಮತಿ ನೀಡಬಹುದು ಎಂದು ಶಿಫಾರಸು ಮಾಡಿತ್ತು.

ವಿಮಾನವೊಂದು 3 ಸಾವಿರ ಮೀಟರ್ ಗಿಂತ ಮೇಲಕ್ಕೆ ಹಾರಲು ಆರಂಭಿಸಿದ ನಂತರ ಇಂಟರ್ ನೆಟ್ ಸಂಪರ್ಕ ಒದಗಿಸಬಹುದು. ಸ್ಯಾಟಲೈಟ್ ಮತ್ತು ಟೆರೆಸ್ಟ್ರಿಯಲ್ (ಭೂಮಿ) ನೆಟ್ ವರ್ಕ್ ಮೂಲಕ ಇಂಟರ್ ನೆಟ್ ಬಳಕೆಗೆ ಅವಕಾಶ ನೀಡಬಹುದು ಎಂದು ಟ್ರಾಯ್ ತನ್ನ ಶಿಫಾರಸ್ಸಿನಲ್ಲಿ ತಿಳಿಸಿತ್ತು.

ಸಾಮಾನ್ಯವಾಗಿ ಯಾವುದೇ ವಿಮಾನಗಳು ಟೇಕಾಫ್ ಆಗಿ ನಾಲ್ಕೈದು ನಿಮಿಷಗಳಲ್ಲೇ 3 ಸಾವಿರ ಮೀಟರ್ ಗಿಂತ ಹೆಚ್ಚಿನ ಎತ್ತರ ತಲುಪುತ್ತದೆ. ಹೀಗಾಗಿ ವೈಫೈ ನೀಡಲು ಯಾವುದೇ ಸಮಸ್ಯೆ ಇರುವುದಿಲ್ಲ. ವಿಮಾನದಲ್ಲಿ ಎರಡು ರೀತಿಯ ಮೂಲಕ ವೈಫೈ ಸೌಲಭ್ಯ ಪಡೆಯಬಹುದು. ಒಂದನೆಯದ್ದು ಭೂಮಿಯಿಂದ ಆಕಾಶಕ್ಕೆ ಇನ್ನೊಂದು ಉಪಗ್ರಹದ ಮೂಲಕ.

ಭೂಮಿಯಿಂದ ನೆಟ್:
ಮೊಬೈಲ್ ಬ್ರಾಡ್ ಬ್ಯಾಂಡ್ ಟವರ್ ಗಳ ಮೂಲಕ ವಿಮಾನದ ಒಳಗಡೆ ಇರುವ ಆಂಟೇನಾಗಳಿಗೆ ಸಿಗ್ನಲ್ ಕಳುಹಿಸುತ್ತದೆ. ಎಲ್ಲ ಕಡೆ ಸಿಗ್ನಲ್ ಸಿಗುತ್ತದೆ ಎಂದು ಹೇಳಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ವಿಮಾನಗಳು ಸಾಗರದಲ್ಲಿ ಸಂಚರಿಸುವಾಗ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

ಉಪಗ್ರಹ ನೆಟ್:
ಈಗ ಹೇಗೆ ಒಂದು ಟಿವಿ ವಾಹಿನಿ ನೆಲದಲ್ಲಿರುವ ಕಚೇರಿಯಿಂದ ಸಿಗ್ನಲ್ ಗಳನ್ನು ಉಪಗ್ರಹಕ್ಕೆ ಕಳುಹಿಸಿ ಡಿಟಿಎಚ್ ಮೂಲಕ ವೀಕ್ಷಕರನ್ನು ತಲಪುತ್ತದೋ ಅದೇ ರೀತಿಯಾಗಿ ನೆಲದಿಂದ ವಿಮಾನಕ್ಕೆ ಎಲ್ಲ ಸಿಗ್ನಲ್ ಗಳನ್ನು ಉಪಗ್ರಹದ ಮೂಲಕವೇ ರವಾನಿಸಲಾಗುತ್ತದೆ. ವಿಮಾನ ತನ್ನ ಆಂಟೆನಾದ ಮೂಲಕ ಉಪಗ್ರಹದಿಂದ ಸಿಗ್ನಲ್ ಪಡೆದು ಬಳಿಕ ರೂಟರ್ ಮೂಲಕ ವೈಫೈ ಸೇವೆ ನೀಡಲಾಗುತ್ತದೆ. ಈ ವ್ಯವಸ್ಥೆಗಾಗಿ ರಿಸೀವರ್ ಮತ್ತು ಟ್ರಾನ್ಸ್ ಮೀಟರ್ ಗಳ ಬಳಕೆ ಮಾಡಲಾಗುತ್ತದೆ.

ಏರ್ ಏಷ್ಯಾ, ಏರ್ ಚೀನಾ, ಏರ್ ಫ್ರಾನ್ಸ್, ಕತಾರ್ ಏರ್‍ವೇಸ್, ಬ್ರಿಟಿಷ್ ಏರ್‍ವೇಸ್, ಎಮಿರೇಟ್ಸ್, ವರ್ಜಿನ್ ಅಮೆರಿಕ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಈಗಾಗಲೇ ಪ್ರಯಾಣಿಕರಿಗೆ ವೈಫೈ ಸೇವೆ ನೀಡುತ್ತಿವೆ.

Click to comment

Leave a Reply

Your email address will not be published. Required fields are marked *