ಬೆಂಗಳೂರು: ಕನ್ನಡದ (Kannada) ಮೇಲಿನ ಅಭಿಮಾನವನ್ನು ಪೆಹಲ್ಗಾಮ್ ದಾಳಿಗೆ ಹೋಲಿಕೆ ಮಾಡಿದ್ದ ಗಾಯಕ ಸೋನು ನಿಗಮ್ (Sonu Nigam) ವಿರುದ್ಧ ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ಹೊರಹಾಕಿವೆ.
ಸೋನು ನಿಗಮ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ಫಿಲ್ಮ್ ಚೇಂಬರ್‌ನ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಸೋಮವಾರ ನಿರ್ಮಾಪಕ ಸಂಘ, ಚಲನಚಿತ್ರ ವಾಣಿಜ್ಯ ಮಂಡಳಿ ಜಂಟಿಯಾಗಿ ಸೇರಿ ಸಭೆ ನಡೆಸಲಿವೆ. ಈ ಸಭೆಯಲ್ಲಿ ಸೋನು ನಿಗಮ್‌ಗೆ ಇನ್ಮುಂದೆ ಕನ್ನಡ ಚಿತ್ರದಲ್ಲಿ ಹಾಡಲು ಅವಕಾಶ ಕೊಡಬೇಕಾ ಬೇಡ್ವಾ? ಎಂಬ ತೀರ್ಮಾನ ಕೈಗೊಳ್ಳಲಿವೆ. ಇದನ್ನೂ ಓದಿ: ಕನ್ನಡಿಗರಲ್ಲಿ ಕ್ಷಮೆಯಾಚಿಸಿ: ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಕನ್ನಡ ನಿರ್ಮಾಪಕನ ಆಕ್ರೋಶ
ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೋನು ನಿಗಮ್ ಹೇಳಿಕೆಯನ್ನ ಖಂಡಿಸಿದ್ದು, ಇನ್ಮುಂದೆ ಕನ್ನಡದಲ್ಲಿ ಹಾಡಲು ಅವರಿಗೆ ಅವಕಾಶ ಕೊಡಬಾರದೆಂದು ಒತ್ತಾಯಿಸಿದರು.
ಏನಿದು ವಿವಾದ?
ಬೆಂಗಳೂರಿನಲ್ಲಿ (Bengaluru) ನಡೆದ ಸಂಗೀತ ಕಾರ್ಯಕ್ರಮದಲ್ಲಿ, ಕನ್ನಡ ಹಾಡು ಹಾಡುವಂತೆ ಪ್ರೇಕ್ಷಕರು ಕೇಳಿದ್ದಕ್ಕೆ, ಕನ್ನಡ… ಕನ್ನಡ… ಇಂಥ ಮನಸ್ಥಿತಿಯಿಂದಲೇ ಪಹಲ್ಗಾಮ್‌ನಲ್ಲಿ ದಾಳಿಯಾಗಿದ್ದು ಎಂದಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ವಿವಾದ ಜೋರಾಗುತ್ತಿದ್ದಂತೆ, ಅವರ ವಿರುದ್ಧ ದೂರು ದಾಖಲಾಗಿದ್ದು, ಎಫ್ಐಆರ್ ಕೂಡ ದಾಖಲಾಗಿದೆ.
ಸೋನು ನಿಗಮ್ ಸ್ಪಷ್ಟನೆ: ಇಷ್ಟೆಲ್ಲಾ ಆದ ಮೇಲೂ ಸೋನು ನಿಗಮ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕನ್ನಡಿಗರು ಒಳ್ಳೆಯವರು, ಆದರೆ ಕಾರ್ಯಕ್ರಮದಲ್ಲಿ ನನಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ಹಾಡುವಂತೆ ಕೇಳಿದ್ದರು. ಅದಕ್ಕಾಗಿ ನಾನು ಆ ನಾಲ್ವರು ಯುವಕರನ್ನ ಉದ್ದೇಶಿಸಿ ಮಾತನಾಡಿದ್ದೆ. ಇದು ಎಲ್ಲಾ ಕನ್ನಡಿಗರಿಗೆ ಹೇಳಿದ ಮಾತಲ್ಲ, ಪಹಲ್ಗಾಮ್‍ನಲ್ಲಿ ಉಗ್ರರು ಭಾಷೆ ಕೇಳಲಿಲ್ಲ, ಧರ್ಮ ಕೇಳಿ ಕೊಂದರು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡ.. ಕನ್ನಡ ಇದಕ್ಕೇನೇ ಭಯೋತ್ಪಾದಕ ದಾಳಿ ನಡೆದಿದ್ದು – ವಿವಾದ ಮೈಮೇಲೆಳೆದುಕೊಂಡ ಸೋನು ನಿಗಮ್