ರಾಯಚೂರು: ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿವೃತ್ತಿ ಘೋಷಿಸಿದ್ದಾರೆ, ರಾಜಕೀಯ ನಿವೃತ್ತಿಯಲ್ಲ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಸಿಎಂ, ನಾನೂ ನಿವೃತ್ತಿ ಅಂಚಿನಲ್ಲಿದ್ದೀನಿ. ನಿವೃತ್ತಿಯಾಗಲ್ಲ, ಇದು ನನಗೆ ಕೊನೆಯ ಚುನಾವಣೆ ಎಂದರು. ರಾಹುಲ್ ಗಾಂಧಿ ಸರ್ವಾನುಮತದಿಂದ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ರಾಹುಲ್ ಗಾಂಧಿ ಮೇಲೆ ದೇಶದ ಯುವಕರು ಅಪಾರ ನಿರೀಕ್ಷೆ ಇಟ್ಟಿದ್ದಾರೆ. ರಾಹುಲ್ ಗಾಂಧಿ ಗುಜರಾತ್ ಗೆ ಹೋದ ಮೇಲೆ ಹೊಸ ಅಲೆ ಆರಂಭವಾಗಿದೆ. ಎಕ್ಸಿಟ್ ಪೋಲ್ ಫಲಿತಾಂಶ ಏನೇ ಹೇಳಿದ್ರು ಗೆಲ್ಲೋ ವಿಶ್ವಾಸ ನಮಗೆ ಇದೆ ಎಂದರು.
ರಾಹುಲ್ ಗಾಂಧಿ ಬಗ್ಗೆ ಕಾಂಗ್ರೆಸ್ ನಾಯಕರಲ್ಲಿ ಯಾರೂ ಅಪಸ್ವರ ಎತ್ತಿಲ್ಲ. ಅವರಿಗೆ ದೊಡ್ಡ ಭವಿಷ್ಯವಿದೆ. ಅವರ ನೇತೃತ್ವದಲ್ಲಿ ಕಾಂಗ್ರೆಸ್ ಇಡೀ ದೇಶದಲ್ಲಿ ಶಕ್ತಿಯಿಯುತವಾಗಿ ಬೆಳೆಯುತ್ತೆ ಅನ್ನೋ ನಂಬಿಕೆಯಿದೆ ಅಂತ ಹೇಳಿದರು.
ಕಳೆದ ಬಾರಿಯೇ ಕೊನೆ ಚುನಾವಣೆ ಅಂತ ಹೇಳಿದ್ದೆ. ಆದ್ರೆ ಬಿಜೆಪಿಯವರ ಕೋಮುವಾದ ನೋಡಿ ಮತ್ತೆ ನಿಲ್ಲಬೇಕು ಅನಿಸಿದೆ. ನನಗೆ ಮರುಜೀವ ಕೊಟ್ಟ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ನಿಲ್ಲುತ್ತೇನೆ. ನಾನು ಸೋಲುತ್ತೇನೆ ಅನ್ನೋಕೆ ಯಡಿಯೂರಪ್ಪನ ಹತ್ರ ಯಾವ ಇಂಟೆಲಿಜೆನ್ಸಿ ಇಲ್ಲ. ನಾನು ಎಲ್ಲಿ ನಿಂತ್ರೂ ಗೆಲ್ಲುತ್ತೇನೆ. 20 ಕ್ಷೇತ್ರಗಳಿವೆ, ಅಲ್ಲಿ ಎಲ್ಲೆ ನಿಂತ್ರು ಗೆಲುವು ನನ್ನದೇ. ವಿಧಾನಸಭೆಗೆ ಕೊನೆ ಚುನಾವಣೆ. ಹಾಗಾಗಿ ಚಾಮುಂಡೇಶ್ವರಿಗೆ ಹೋಗುತ್ತಿದ್ದೇನೆ ಎಂದರು.
ಪರೇಶ್ ಮೆಸ್ತಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ರಾಮಲಿಂಗಾರೆಡ್ಡಿ ನಾಲಾಯಕ್ ಮಂತ್ರಿ ಅಲ್ಲ, ಜವಾಬ್ದಾರಿಯುತ ಗೃಹ ಸಚಿವ. ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ರೌಡಿಗಳ ರೀತಿ ಮಾತನಾಡುತ್ತಾರೆ. ಅವರು ರಾಜಕೀಯದಲ್ಲಿ ಇರಲು ಲಾಯಕ್ಕಿದಾರಾ? ಏನ್ ತಪರಾಕಿ ಹಾಕ್ತಾರೆ ಕಾನೂನು ಇಲ್ಲವಾ?ಬೇಜವಾಬ್ದಾರಿಯಾಗಿ ಮಾತನಾಡಬಾರದು ಅಂತ ಬೇಸರ ವ್ಯಕ್ತಪಡಿಸಿದರು.
ಯಡಿಯೂರಪ್ಪ, ಈಶ್ವರಪ್ಪಗೆ ಆದರ್ಶಗಳೇ ಇಲ್ಲ. ಅವರ ಬಗ್ಗೆ ಮಾತನಾಡುವುದು ಕೂಡ ಸಮಯ ವ್ಯರ್ಥ ಅಂತ ಸಿದ್ದರಾಮಯ್ಯ ಹೇಳಿದರು.