ನಾಮಪತ್ರ ಸಲ್ಲಿಸುವ ಮುನ್ನ ವಿಶೇಷ ಪೂಜೆ ಸಲ್ಲಿಸಿದ ಸೋನಿಯಾ ಗಾಂಧಿ

Public TV
1 Min Read
SONIA GANDHI

ಲಕ್ನೋ: ಉತ್ತರ ಪ್ರದೇಶದ ರಾಯ್‍ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸುವ ಮುನ್ನ ಕಾಂಗ್ರೆಸ್ ಅಭ್ಯರ್ಥಿ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಸೋನಿಯಾ ಗಾಂಧಿ ಅವರು ಹವನ ನಡೆಸಿದರು. ಪುತ್ರ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪುತ್ರಿ ಪ್ರಿಯಾಂಕ ಗಾಂಧಿ ಸಾಥ್ ನೀಡಿದರು. ಈ ವೇಳೆ ಕಾಂಗ್ರೆಸ್ಸಿನ ಅನೇಕ ನಾಯಕರು ಹಾಜರಿದ್ದರು.

ಸೋನಿಯಾ ಗಾಂಧಿ ಅವರು 2004, 2006 (ಉಪ ಚುನಾವಣೆ), 2009 ಮತ್ತು 2014ರ ಲೋಕಸಭಾ ಚುನಾವಣೆಯಲ್ಲಿ ರಾಯ್‍ಬರೇಲಿ ಕ್ಷೇತ್ರದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಈ ಮೂಲಕ ರಾಯ್‍ಬರೇಲಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಆದರೆ ಈ ಬಾರಿ ಬಿಜೆಪಿಯು ರಾಯ್‍ಬರೇಲಿಯನ್ನು ತನ್ನ ವಶಕ್ಕೆ ಪಡೆಯಲು ಮುಂದಾಗಿದೆ.

ಕಾಂಗ್ರೆಸ್ ಪಕ್ಷದಿಂದ ಕಳೆದ ವರ್ಷ ಹೊರಬಂದು ಬಿಜೆಪಿ ಸೇರ್ಪಡೆಯಾದ ದಿನೇಶ್ ಪ್ರತಾಪ್ ಸಿಂಗ್ ಅವರು ಸೋನಿಯಾ ಗಾಂಧಿ ವಿರುದ್ಧ ಕಣಕ್ಕೆ ಇಳಿದಿದ್ದಾರೆ. ಇತ್ತ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‍ಪಿ) ಹಾಗೂ ಬಹುಜನ ಸಮಾಜ ಪಕ್ಷ (ಬಿಎಸ್‍ಪಿ) ಮೈತ್ರಿ ಮಾಡಿಕೊಂಡಿವೆ. ಹೀಗಾಗಿ ಎರಡೂ ಪಕ್ಷಗಳು ಒಮ್ಮತದಿಂದ ರಾಯ್‍ಬರೇಲಿ ಹಾಗೂ ಅಮೇಥಿ ಲೋಕಸಭಾ ಕ್ಷೇತ್ರಗಳನ್ನು ಕಾಂಗ್ರೆಸ್‍ಗೆ ಬಿಟ್ಟಿವೆ.

SONIA GANDHI 3

ರಾಯ್‍ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ 1957ರಿಂದ 2014ರವರೆಗೆ ಮೂರು ಉಪಚುನಾವಣೆ ಸೇರಿದಂತೆ ಒಟ್ಟು 19 ಬಾರಿ ಗೆಲುವು ಸಾಧಿಸಿದೆ. ಆದರೆ ಮೂರು ಬಾರಿ (1977, 1996 ಮತ್ತು 1998ರಲ್ಲಿ) ಸೋತಿದೆ. ಈ ಮೂಲಕ 1977ರಲ್ಲಿ ಭಾರತೀಯ ಲೋಕ ದಳದ ಅಭ್ಯರ್ಥಿ ರಾಜ್ ನಾರಾಯಣ್ ಅವರು ರಾಯ್‍ಬರೇಲಿಯಲ್ಲಿ ಗೆಲುವು ಸಾಧಿಸಿದ್ದರು. 1996 ಮತ್ತು 1998ರಲ್ಲಿ ಬಿಜೆಪಿ ಅಭ್ಯರ್ಥಿ ಅಶೋಕ್ ಕುಮಾರ್ ಸಿಂಗ್ ಜಯ ಗಳಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *