ಹನಿಮೂನ್‌ ಮರ್ಡರ್‌ ಕೇಸ್‌ – ಹಂತಕಿ ಸೋನಂ ಜೊತೆ ಸಂಬಂಧ ಕಡಿದುಕೊಂಡ ಕುಟುಂಬ

Public TV
3 Min Read
Meghalaya Honeymoon

ಶಿಲ್ಲಾಂಗ್‌: ಮೇಘಾಲಯಕ್ಕೆ (Meghalaya) ಹನಿಮೂನ್‌ಗೆ (Honeymoon) ತೆರಳಿದ್ದ ವೇಳೆ ಪತಿ ರಾಜಾ ರಘುವಂಶಿ ಕೊಲೆಗೆ ಸಂಚು ರೂಪಿಸಿದ್ದನ್ನು ಸೋನಂ ರಘುವಂಶಿ (Sonam Raghuvanshi) ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಹಂತಕಿ ಸೋನಂ ಕುಟುಂಬಸ್ಥರು ಆಕೆಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ.

ಆರಂಭದಲ್ಲಿ ಸೋನಂ ನಿರಪರಾಧಿ ಎಂದು ಆಕೆಯ ಕುಟುಂಬ ಹೇಳಿಕೊಂಡಿತ್ತು. ಆದರೆ ಸಾಕ್ಷಿಗಳು ಪತ್ತೆಯಾದ ಬಳಿಕ, ಹಾಗೂ ಆಕೆ ಹತ್ಯೆ ಮಾಡಿದ್ದನ್ನು ಒಪ್ಪಿಕೊಳ್ಳುತ್ತಿದ್ದಂತೆ ಅವಳೊಂದಿಗಿನ ಎಲ್ಲಾ ಸಂಬಂಧವನ್ನು ಕುಟುಂಬ ಕಳೆದುಕೊಂಡಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮದುವೆಯಾಗಿ ಒಂದು ತಿಂಗಳ ಬಳಿಕ ಕೊನೆಗೂ ಸತ್ಯ ಕಕ್ಕಿದ ಹನಿಮೂನ್ ಹಂತಕಿ – ತಪ್ಪೊಪ್ಪಿಕೊಂಡ ಸೋನಮ್ ರಘುವಂಶಿ

ಸಿಸಿಟಿವಿ ದೃಶ್ಯಾವಳಿಯಲ್ಲಿ ಸೋನಂ ಹಂತಕರನ್ನು ಭೇಟಿಯಾಗಿರುವುದು ಸೆರೆಯಾಗಿದೆ. ಹತ್ಯೆ ನಡೆದ ಸ್ಥಳದಲ್ಲಿ ಅವರಿಗೆ ಸೇರಿದ್ದ ರಕ್ತಸಿಕ್ತ ಬಟ್ಟೆಗಳನ್ನು ಎಸ್‌ಐಟಿ ವಶಕ್ಕೆ ಪಡೆದಿದೆ. ಇನ್ನೂ ಸೋನಂ ಪ್ರೇಮಿ ರಾಜ್ ಕುಶ್ವಾಹ ಹತ್ಯೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ. ಇದರ ಜೊತೆಗೆ ಎಸ್‌ಐಟಿ ಪ್ರಮುಖ ಸಾಕ್ಷಿಗಳನ್ನು ಕಲೆಹಾಕಿದೆ ಎಂದು ಮೂಲಗಳು ತಿಳಿಸಿವೆ.

Meghalaya Honeymoon 3

ರಾಜಾ ಅವರ ಹತ್ಯೆಗೆ ಸೋನಂ, ವಿಶಾಲ್ ಸಿಂಗ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ ಎಂಬ ಮೂವರು ಹಂತಕರಿಗೆ ಸುಪಾರಿ ನೀಡಿದ್ದಳು. ಅದರಂತೆ ಸಂಚು ಮಾಡಿ, ಸೋನಂ ಮತ್ತು ರಾಜಾ ಚಾರಣಕ್ಕೆ ಹೋಗಿದ್ದ ವೇಳೆ, ಮೂವರು ಅವರೊಂದಿಗೆ ಸೇರಿಕೊಂಡಿದ್ದರು. ಬಳಿಕ ಸೊಹ್ರಾದ ಜಲಪಾತದ ಬಳಿಯ ಕಮರಿ ಬಳಿ ರಾಜಾ ಅವರನ್ನು ಬಂಡೆಯಿಂದ ತಳ್ಳಲು ಯತ್ನಿಸಿದ್ದರು. ಆದರೆ ಇದು ಕೈಗೂಡದಿದ್ದಾಗ, ಸೋನಂ ಎದುರಿನಲ್ಲೇ ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದರು. ಜೂ.2 ರಂದು ಅವರ ಶವ ಪತ್ತೆಯಾಗಿತ್ತು.

ಕೊಲೆ ಬಳಿಕ ವಾರಣಾಸಿಯ ಡಾಬಾವೊಂದರ ಬಳಿ ಸೋನಂನನ್ನು ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆ ನಂತರ ಉತ್ತರ ಪ್ರದೇಶ ಪೊಲೀಸರು ಆಕೆಯನ್ನು ಮೇಘಾಲಯ ಪೊಲೀಸರಿಗೆ ಹಸ್ತಾಂತರಿಸಿದ್ದರು. ಮಂಗಳವಾರ ಬೆಳಿಗ್ಗೆ ಮೇಘಾಲಯ ಪೊಲೀಸರು ಆಕೆಯನ್ನು ಬಿಹಾರದ ಪಾಟ್ನಾದ ಫುಲ್ವರಿ ಷರೀಫ್ ಠಾಣೆಗೆ ಕರೆತಂದಿದ್ದರು. ಮಂಗಳವಾರ ಮೇಘಾಲಯ ಪೊಲೀಸರು ಆಕೆಯನ್ನು ತಮ್ಮ ವಶಕ್ಕೆ ಪಡೆದಿದ್ದರು. ಇನ್ನುಳಿದ ನಾಲ್ವರು ಆರೋಪಿಗಳಾದ ಆಕಾಶ್ ರಜಪೂತ್, ವಿಶಾಲ್ ಸಿಂಗ್ ಚೌಹಾಣ್, ರಾಜ್ ಸಿಂಗ್ ಕುಶ್ವಾಹ ಹಾಗೂ ಆನಂದ್‌ನನ್ನು ಹೆಚ್ಚಿನ ತನಿಖೆಗಾಗಿ ಶಿಲ್ಲಾಂಗ್‌ಗೆ ಕರೆದೊಯ್ಯಲಾಗಿತ್ತು.

ಏನಿದು ಪ್ರಕರಣ?
ಇಂದೋರ್ (Indore) ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.

ಹೃದ್ರೋಗಿಯಾಗಿದ್ದ ಸೋನಂ ತಂದೆ ದೇವಿ ಸಿಂಗ್, ತನ್ನ ಕಾರ್ಖಾನೆಯಲ್ಲೇ ಕೆಲಸ ಮಾಡ್ತಿದ್ದ ರಾಜ್‌ಗೆ ಕೊಟ್ಟು ಮದ್ವೆ ಮಾಡಲು ಒಪ್ಪಿಕೊಳ್ಳಲ್ಲ ಅನ್ನೋದು ಸೋನಂಗೆ ಗೊತ್ತಿತ್ತು. ಹಾಗಾಗಿಯೇ ಮಾಸ್ಟರ್ ಪ್ಲ್ಯಾನ್ ಮಾಡಿದ್ದಳು. ಮೊದಲು ರಾಜನನ್ನ ಮದುವೆ ಆಗಿಬಿಡೋಣ, ಅವನನ್ನು ಕೊಂದಮೇಲೆ ವಿಧವೆ ಅನ್ನೋ ಮಮಕಾರದಲ್ಲಾದ್ರೂ ರಾಜ್‌ಗೆ ತನ್ನನ್ನು ಕೊಟ್ಟು ಮದುವೆ ಮಾಡುತ್ತಾರೆ ಎಂಬುದು ಅವಳ ಪ್ಲ್ಯಾನ್ ಆಗಿತ್ತು ಅನ್ನೋದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ಇಂದು ಮಧ್ಯರಾತ್ರಿ ಮೇಘಾಲಯಕ್ಕೆ ಹಂತಕಿ ಸೋನಮ್

Share This Article