ಮೈಸೂರು: ಸಿಎಂ ಸಿದ್ದರಾಮಯ್ಯನವರ (CM Siddaramaiah) ಸರ್ಕಾರದಲ್ಲಿ ಪುತ್ರನ ಹಸ್ತಕ್ಷೇಪ ಹೆಚ್ಚಾಗಿದೆ, ವೈಎಸ್‌ಟಿ (YST) ಸಂಗ್ರಹಿಸುತ್ತಿದ್ದಾರೆ ಎಂಬ ವಿಪಕ್ಷಗಳ ಆರೋಪದ ಬೆನ್ನಲ್ಲೇ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ತಂದೆಯ ಜೊತೆ ಮಾತನಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಬುಧವಾರ ಯತೀಂದ್ರ ಅವರು ವರುಣ (Varuna) ಕ್ಷೇತ್ರ ವ್ಯಾಪ್ತಿಯ ಮೈಸೂರು ತಾಲೂಕಿನ ಚಟ್ನಹಳ್ಳಿಪಾಳ್ಯ ಗ್ರಾಮದಲ್ಲಿ ಸಾರ್ವಜನಿಕ ಕುಂದುಕೊರತೆ ವಿಚಾರಣೆ ಸಭೆ ನಡೆಸಿ ಗ್ರಾಮದ ಜನರ ಅಹವಾಲು ಸ್ವೀಕರಿಸುತ್ತಿದ್ದರು.
ಈ ವೇಳೆ ಅವರು ತಂದೆಗೆ ಕರೆ ಮಾಡಿದ್ದಾರೆ. ಯಾವುದೋ ವಿಷಯವನ್ನು ಪ್ರಸ್ತಾಪ ಮಾಡಿದ ಅವರು, ನಾನು ನೀಡಿದ ಲಿಸ್ಟ್‌ನದ್ದು ಮಾತ್ರ ಮಾಡಿ ಎಂದು ಸಾರ್ವಜನಿಕರ ಮುಂದೆಯೇ ತಾನು ನೀಡಿದ ಪಟ್ಟಿಯ ಬಗ್ಗೆ ಮಾತುಕತೆ ಮಾಡಿದ್ದಾರೆ.
ಆರಂಭದಲ್ಲಿ ಅಪ್ಪ ಹೇಳಿ ಅಂತಾ ಯತೀಂದ್ರ ಸಿದ್ದರಾಮಯ್ಯ ಮಾತು ಶುರುಮಾಡಿದ್ದಾರೆ. ಈ ವೇಳೆ “ವಿವೇಕಾನಂದ ಯಾರು?” ಎಂದು ಸಿಎಂ ಪ್ರಶ್ನೆ ಕೇಳಿದ್ದಾರೆ. ಆಗ ಯತೀಂದ್ರ, ಆ ಮಹದೇವ ಅವರಿಗೆ ಪೋನ್ ನೀಡುವಂತೆ ಸಿಎಂಗೆ ಹೇಳುತ್ತಾರೆ.
ಮಹದೇವ್‌ಗೆ ಫೋನ್ ಕೊಟ್ಟ ತಕ್ಷಣ ಅವರನ್ನು ತರಾಟೆ ತೆಗೆದುಕೊಂಡ ಯತೀಂದ್ರ, ನಾನು ಕೊಟ್ಟಿದ್ದು ಬಿಟ್ಟು ಬೇರೆ ಯಾವುದು ಅದು ಅಂತಾ ಪ್ರಶ್ನಿಸಿದ್ದಾರೆ. ನನಗೆ ಅದೆಲ್ಲಾ ಗೊತ್ತಿಲ್ಲ. ನಾನು ಕೊಟ್ಟಿರುವ ನಾಲ್ಕು, ಐದು ಮಾತ್ರ ಮಾಡುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ನಿಂತು ಶಾಸಕರಾಗಿ ಆಯ್ಕೆ ಆಗಿದ್ದರು. ಆದರೆ ಈ ಬಾರಿ ಈ ಕ್ಷೇತ್ರವನ್ನು ತಂದೆಗೆ ಬಿಟ್ಟು ಕೊಟ್ಟಿದ್ದರು.