ಕಲಿಯುಗದ ಶ್ರವಣಕುಮಾರ- ಸ್ಕೂಟರ್​ನಲ್ಲಿ ತಾಯಿಗೆ ತೀರ್ಥಯಾತ್ರೆ

Public TV
1 Min Read
MOTHER

ಬೆಂಗಳೂರು: ಪುತ್ರನೋರ್ವ ತನ್ನ ತಾಯಿಯನ್ನು ಹಳೆ ಸ್ಕೂಟರ್ ನಲ್ಲಿ ಕರೆದುಕೊಂಡು ತೀರ್ಥಯಾತ್ರೆಯನ್ನು ಮಾಡಿಸುತ್ತಿದ್ದಾರೆ. ಮೈಸೂರು ನಿವಾಸಿಯಾಗಿರುವ ಕೃಷ್ಣ ಕುಮಾರ್ ತಮ್ಮ ತಾಯಿ ರತ್ನಮ್ಮ ಜೊತೆ ತೀರ್ಥಯಾತ್ರೆ ಮಾಡುತ್ತಾ ಇದೀಗ ಛತ್ತೀಸ್ ಗಢದ ದಂತೇವಾಡ ತಲುಪಿದ್ದಾರೆ.

ಕೃಷ್ಣ ಕುಮಾರ್ ಅವರ ತಂದೆ ನಾಲ್ಕು ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಒಂದು ದಿನ ರತ್ಮಮ್ಮನವರು, ನಿಮ್ಮ ತಂದೆ ಕೊನೆಗೂ ನನಗೆ ವೆಲ್ಲೂರು ದೇವಸ್ಥಾನ ತೋರಿಸಲಿಲ್ಲ. ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿಬಿಟ್ಟರು ಎಂದು ನೋವು ತೋಡಿಕೊಂಡಿದ್ದರು. ಅಂದು ಕೃಷ್ಣ ಕುಮಾರ್, ಕೇವಲ ವೆಲ್ಲೂರು ಏಕೆ, ದೇಶದ ನಾಲ್ಕು ದಿಕ್ಕಿನಲ್ಲಿರುವ ಕ್ಷೇತ್ರಗಳ ದರ್ಶನ ಮಾಡಿಸುತ್ತೇನೆ ಎಂದು ಮಾತು ಕೊಟ್ಟಿದ್ದರು.

MOTHER a

ತಾಯಿಗೆ ನೀಡಿದ ಮಾತಿನಂತೆ ತಂದೆಯ ನಲವತ್ತು ವರ್ಷದ ಹಳೆಯ ಸ್ಕೂಟರ್ ಮೇಲೆ ಅಮ್ಮನ ಜೊತೆ ಕೃಷ್ಣ ಕುಮಾರ್ ತೀರ್ಥಯಾತ್ರೆ ಆರಂಭಿಸಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶ, ಮಾಹಾರಾಷ್ಟ್ರ, ಗೋವಾ, ಪುದುಚೇರಿ ಬಳಿಕ ಇದೀಗ ದಂತೇವಾಡದ ತಲುಪಿದ್ದು, ದಂತೇಶ್ವರಿ ದೇವರ ದರ್ಶನ ಪಡೆಯಲಿದ್ದಾರೆ.

ತಂದೆ-ತಾಯಿ ಸೇವೆಯಲ್ಲಿ ತೊಡಗಿಕೊಂಡಿರುವ ಕೃಷ್ಣಕುಮಾರ್ ಗೆ ಮದುವೆ ಆಗಿಲ್ಲ. ತಂದೆಯ ನಿಧನದ ಬಳಿಕ ತಾಯಿಯೇ ಕೃಷ್ಣ ಕುಮಾರ್ ಅವರ ದೊಡ್ಡ ಆಸ್ತಿಯಾಗಿದ್ದಾರೆ. ತೀರ್ಥಯಾತ್ರೆಯನ್ನ ಬಸ್ ಅಥವಾ ಬೇರೆ ವಾಹನದ ಮೂಲಕ ಕೈಗೊಳ್ಳಬಹುದಿತ್ತು ಎಂದು ಕೇಳಿದ್ರೆ, ಸ್ಕೂಟರ್ ನಮ್ಮ ಜೊತೆಯಲ್ಲಿದ್ದರೆ ತಂದೆಯೊಂದಿಗೆ ಪ್ರಯಾಣ ಮಾಡುತ್ತಿದ್ದೇವೆ ಅನ್ನಿಸುತ್ತದೆ ಎಂದು ಕೃಷ್ಣ ಕುಮಾರ್ ಹೇಳುತ್ತಾರೆ.

Mother Son

ತಾಯಿಯ ಸೇವೆ ಮಾಡುವುದರಲ್ಲಿಯೇ ನನಗೆ ಖುಷಿ ಹಾಗೂ ತೃಪ್ತಿ ಸಿಗುತ್ತದೆ. ಸ್ಕೂಟರ್ ಜೊತೆ ತಂದೆಯ ನೆನಪುಗಳು ಬೆಸೆದುಕೊಂಡಿವೆ. ಒಂದು ಸ್ಟೆಪ್ನಿ ಜೊತೆ ಪ್ರಯಾಣ ಮಾಡುತ್ತಿದ್ದು, ಇದೂವರೆಗೂ ಎರಡು ಬಾರಿ ಮಾತ್ರ ಮಾರ್ಗ ಮಧ್ಯೆ ಸ್ಕೂಟರ್ ಪಂಚರ್ ಆಗಿದೆ. ಹೋದ ಸ್ಥಳಗಳಲ್ಲಿ ಒಳ್ಳೆಯ ಜನರು ಸಿಗುತ್ತಿದ್ದು, ನಮಗೆ ಸಹಾಯ ಮಾಡುತ್ತಿದ್ದಾರೆ ಎಂದು ಕೃಷ್ಣ ಕುಮಾರ್ ತಿಳಿಸಿದರು.

ಮಗ ನನಗಾಗಿ ಮದುವೆ ಮಾಡಿಕೊಳ್ಳಲಿಲ್ಲ. ಕೃಷ್ಣ ಕುಮಾರನನೇ ನನಗೆ ಮಗ ಮತ್ತು ಮಗಳಾಗಿ ನೋಡಿಕೊಳ್ಳುತ್ತಿದ್ದಾನೆ. ಪ್ರಯಾಣದಲ್ಲಿ ಇದೂವರೆಗೂ ಯಾವುದೇ ತೊಂದರೆ ಆಗಿಲ್ಲ. ಇಂತಹ ಮಗನನ್ನು ಎಲ್ಲರಿಗೂ ದೇವರು ಕರುಣಿಸಲಿ ಎಂದು ತಾಯಿ ರತ್ನಮ್ಮ ಪುತ್ರನ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.

Share This Article
Leave a Comment

Leave a Reply

Your email address will not be published. Required fields are marked *