ಚಿತ್ರದುರ್ಗ: ಮಗನೊಬ್ಬ ತನ್ನ ತಾಯಿಯನ್ನ ಕೊಂದ ತಂದೆಯನ್ನೆ ಜೈಲಿಗೆ ಕಳಿಸಿದ್ದು, ಆತನಿಗೆ ಅನಾಥ ಪ್ರಜ್ಞೆ ಕಾಡದಿರಲೆಂದು ಖಾಸಗಿ ಶಾಲೆಯೊಂದು ಆತನನ್ನು ದತ್ತು ಪಡೆದಿದೆ.
ಬಗ್ಗಲರಂಗವ್ವನಹಳ್ಳಿ ಗ್ರಾಮದ ನಾಲ್ಕು ವರ್ಷದ ಬಾಲಕ ಧನುಷ್ ತಾಯಿ ಕೊಲೆಯಾದಾಗ ಕಣ್ಣಾರೆ ಕಂಡ ಸತ್ಯವನ್ನ ನ್ಯಾಯಾಧೀಶರ ಮುಂದೆ ನಿರಾತಂಕವಾಗಿ ಹೇಳಿ ಈಗ ಹೀರೋ ಆಗಿದ್ದಾನೆ.
ಏನಿದು ಪ್ರಕರಣ?
ಶೀಲ ಶಂಕಿಸಿ ಹೆತ್ತ ತಾಯಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ತಂದೆ ಕೊಲೆ ಮಾಡಿದ್ದನ್ನು ಧನುಷ್ ನೋಡಿದ್ದ. ಕೋರ್ಟ್ ವಿಚಾರಣೆಯ ವೇಳೆ ಧನುಷ್ ನನ್ನ ತಾಯಿಯನ್ನು ಕೊಲೆ ಮಾಡಿದ್ದು ತಂದೆಯೇ ಎಂದು ಹೇಳಿದ್ದ. ಈ ಹೇಳಿಕೆಯನ್ನೇ ಮುಖ್ಯ ಸಾಕ್ಷ್ಯವನ್ನಾಗಿದ ಪರಿಗಣಿಸಿದ ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ಹೆಂಡತಿಯ ಕೊಲೆ ಮಾಡಿದ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ತನ್ನ ತಂದೆ-ತಾಯಿ ಇಬ್ಬರನ್ನು ಕಳೆದುಕೊಂಡಿರುವ ಈತನ ಸ್ಥಿತಿ ಅರಿತ ಅನಿವಾಸಿ ಭಾರತೀಯ ಮಂಜುನಾಥ್ ಚಿತ್ರದುರ್ಗ ನಗರದಲ್ಲಿರುವ ಕೆಕೆ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಈತನಿಗೆ ವಿದ್ಯಾಭ್ಯಾಸ ನೀಡಲು ಮುಂದಾಗಿದ್ದಾರೆ. ಆತ ಎಲ್ಲಿಯವರೆಗೆ ಓದಿದ್ರೂ ನಾನು ಸಹಾಯ ಮಾಡ್ತೀನಿ ಅಂತ ಮುಂದೆ ಬಂದಿದ್ದಾರೆ. ಅಷ್ಟೇ ಅಲ್ಲದೇ ಇಂತಹ ಪರಿಸ್ಥಿತಿಯಲ್ಲಿರೋ ಯಾವುದೇ ಮಕ್ಕಳಿಗೂ ಸಹಾಯ ಮಾಡುತ್ತೇನೆ ಎಂದಿದ್ದಾರೆ.
ಚಿತ್ರದುರ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರು, ಅನಾಥರಾಗಿರುವ ಈತನಿಗೆ ಆಧಾರ ಕಲ್ಪಿಸಲು ಮುಂದಾಗಿದ್ದು, ಸರ್ಕಾರದ ನೆರವು ಕೊಡಿಸುವ ಪ್ರಯತ್ನ ಕೂಡ ಮಾಡಿದ್ದಾರೆ. ಅಷ್ಟೇ ಅಲ್ಲದೆ ಶಾಲೆಯ ಅಧ್ಯಕ್ಷರ ಜೊತೆ ಮಾತನಾಡಿ ನಮ್ಮ ಮೊಮ್ಮಗನಿಗೆ ಇಂತಹ ದೊಡ್ಡ ಶಾಲೆಯಲ್ಲಿ ಉಚಿತ ಶಿಕ್ಷಣ ಸಿಗುವಂತೆ ಮಾಡಿದ್ದಾರೆ ಎಂದು ಬಾಲಕನ ಅಜ್ಜಿ ಶಾಂತಮ್ಮ ನ್ಯಾಯಾಧೀಶರನ್ನ ಮನಸಾರೆ ಸ್ಮರಿಸಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews