ಧಾರವಾಡ: ಕುಡಿಯಲು ಹಣ ಕೊಡದಿದ್ದಕ್ಕೆ ಹೆತ್ತ ತಾಯಿಯನ್ನು ಮಗನೇ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಯಲವದಾಳ ಗ್ರಾಮದಲ್ಲಿ ನಡೆದಿದೆ.
ಶಂಕ್ರವ್ವ ನಿಗದಿ(68) ಕೊಲೆಯಾದ ಮಹಿಳೆ. ಮಗ ವೀರಭದ್ರಪ್ಪ ನಿಗದಿ(35) ಕುಡಿತದ ಚಟಕ್ಕೆ ದಾಸನಾಗಿದ್ದ. ಕುಡಿಯಲು ಹಣ ಕೊಡುವಂತೆ ತಾಯಿಯನ್ನು ಮಗ ಪ್ರತಿ ದಿನ ಕಾಡುತ್ತಿದ್ದನು. ಹಣ ಕೊಡದ ವೇಳೆ ತಾಯಿಯ ಜೊತೆ ಪ್ರತಿ ದಿನ ಜಗಳ ಮಾಡುತ್ತಿದ್ದನು.
ಕಳೆದ ಎರಡು ದಿನಗಳ ಹಿಂದೆಯೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ತಾಯಿ-ಮಗನ ಮಧ್ಯೆ ಗಲಾಟೆ ನಡೆದಿದೆ. ಕೊನೆಗೆ ಹಣ ಕೊಡಲು ತಾಯಿ ಒಪ್ಪದಿದ್ದಾಗ ಸಿಟ್ಟಿನಿಂದ ಮಗ ವೀರಭದ್ರಪ್ಪ ತಾಯಿಯ ತಲೆಗೆ ಕಲ್ಲಿನಿಂದ ಹೊಡೆದಿದ್ದಾನೆ. ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಜಗಳ ಬಿಡಿಸಲು ಬಂದ ಹೆಂಡತಿ ಬಸವ್ವಾ ತಲೆಗೆ ಅದೇ ಕಲ್ಲಿನಿಂದ ಹೊಡೆದಿದ್ದಾನೆ. ಸದ್ಯ ಬಸವ್ವಾ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ತಾಯಿಯನ್ನು ಕೊಲೆ ಮಾಡಿರೋ ಮಗ ವೀರಭದ್ರಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.