ಮಂಗಳೂರು: ತಂದೆಯೇ ತನ್ನ ಸ್ವಂತ ಮಗನನ್ನು ಚೂರಿಯಿಂದ ಇರಿದು ಕೊಲೆಗೈದಿರುವ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಟ್ಲ ಎಂಬಲ್ಲಿ ನಡೆದಿದೆ.
ನವೀನ್ (28) ಕೊಲೆಯಾದವನಾಗಿದ್ದು ತಂದೆ ಮಂಜುನಾಥ್ ಹಾಗೂ ಇನ್ನೊಬ್ಬ ಪುತ್ರ ರಾಘವೇಂದ್ರ ಕೃತ್ಯ ಎಸಗಿದ್ದಾರೆ. ಕಳೆದ ಡಿ.31 ರಂದು ರಾತ್ರಿ ಹೊಸ ವರ್ಷದ ಪಾರ್ಟಿ ವೇಳೆ ನವೀನ್ ಕುಡಿದ ಮತ್ತಿನಲ್ಲಿ ಮನೆಯಲ್ಲಿ ಗಲಾಟೆ ಮಾಡಿದ್ದ. ತಂದೆಗೆ ಚೂರಿಯಿಂದ ತಿವಿದಿದ್ದರಿಂದ ಮಂಜುನಾಥ್ ಹೊಟ್ಟೆಗೆ ಗಾಯವಾಗಿತ್ತು.
Advertisement
Advertisement
ಇದೇ ದ್ವೇಷ ಮನೆಯಲ್ಲಿ ಇವರಿಬ್ಬರ ಮಧ್ಯೆ ಕಾಳಗಕ್ಕೆ ಕಾರಣವಾಗಿತ್ತು. ಭಾನುವಾರ ರಾತ್ರಿ ಇದೇ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ನವೀನ್ ಮೇಲೆ ತಂದೆ ಮತ್ತು ಇನ್ನೊಬ್ಬ ಮಗ ರಾಘವೇಂದ್ರ ಸೇರಿಕೊಂಡು ಚೂರಿಯಿಂದ ಹಲ್ಲೆ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮನೆಯ ಮುಂಭಾಗದ ರಸ್ತೆಯಲ್ಲಿ ರಕ್ತ ಚೆಲ್ಲಾಡಿದ್ದು ನವೀನನ್ನು ಅಟ್ಟಿಸಿಕೊಂಡು ಹೋಗಿ ಕೊಲೆಗೈದಿರುವಂತೆ ಕಂಡುಬಂದಿದೆ.
Advertisement
Advertisement
ಮಂಜುನಾಥ್ ಮತ್ತು ರಾಘವೇಂದ್ರ ಬೆಳ್ತಂಗಡಿಯಲ್ಲಿ ಜ್ಯೋತಿಷ್ಯ ವೃತ್ತಿ ಮಾಡಿಕೊಂಡಿದ್ದರೆ. ನವೀನ್ ಮನೆಯಲ್ಲಿ ತೋಟದ ಕೆಲಸ ಮಾಡಿಕೊಂಡಿದ್ದ. ಇದೀಗ ಘಟನೆ ಬಗ್ಗೆ ನವೀನ್ ಪತ್ನಿ ಶ್ರೀಮತಿ ಬೆಳ್ತಂಗಡಿ ಠಾಣೆಯಲ್ಲಿ ತಂದೆ – ಮಗನ ವಿರುದ್ಧ ದೂರು ನೀಡಿದ್ದಾರೆ.
ಮೂಲತಃ ಹಾಸನ ಜಿಲ್ಲೆಯ ಕುಟುಂಬವಾಗಿದ್ದು ಬೆಳ್ತಂಗಡಿಯಲ್ಲಿ ನೆಲೆಸಿ ಮನೆ ಮಾಡಿಕೊಂಡಿದ್ದರು. ಆರೋಪಿ ತಂದೆ- ಮಗ ಈಗ ನಾಪತ್ತೆಯಾಗಿದ್ದಾರೆ.