ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಹಣ ನೀಡಿಲ್ಲ ಎಂದು ವ್ಯಕ್ತಿಯೊಬ್ಬ ತಾಯಿಯನ್ನೇ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ನಡೆದಿದೆ.
ವೃದ್ಧೆ ಮೀನಾಕ್ಷಿ ಮಗನಿಂದ ಕೊಲೆಯಾದ ದುರ್ದೈವಿ. ಗಣೇಶ್(48) ಕುಡಿದ ಅಮಲಿನಲ್ಲಿ ತಾಯಿಯನ್ನೇ ಕೊಲೆ ಮಾಡಿದ್ದಾನೆ. ಗಣೇಶ್ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದನು. ಕೆಲವು ವರ್ಷಗಳ ಹಿಂದೆ ಗಣೇಶ್ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡಿದ್ದನು. ಆಗಿನಿಂದ ಗಣೇಶ್ ತಾಯಿಯೇ ದುಡಿದು ಸಂಸಾರವನ್ನು ನಡೆಸುತ್ತಿದ್ದರು.
ಕೆಲವು ದಿನಗಳ ಹಿಂದೆ ಗಣೇಶ್ ತಾಯಿಗೆ ಸರ್ಕಾರದಿಂದ ಸುಮಾರು 1.5 ಸಾವಿರ ರೂ. ಪಿಂಚಣಿ ಹಣ ಬಂದಿತ್ತು. ಆ ಹಣವನ್ನು ಮಗ ತನಗೆ ಕೊಡು ಎಂದು ಪೀಡಿಸುತ್ತಿದ್ದನು. ಈ ವಿಚಾರವಾಗಿ ತಾಯಿ ಮಗನ ನಡುವೆ ಹಲವು ಬಾರಿ ಜಗಳ ಕೂಡ ನಡೆದಿತ್ತು. ಆದ್ರೆ ಬುಧವಾರ ರಾತ್ರಿ ಮನೆಗೆ ಕುಡಿದು ಬಂದಿದ್ದ ಗಣೇಶ್ ತನ್ನ ತಾಯಿಗೆ ಹಣ ನೀಡುವಂತೆ ಕಾಡಿದ್ದಾನೆ. ಈ ವೇಳೆ ಜಗಳ ತಾರಕಕ್ಕೆ ಏರಿ ಕೋಪಗೊಂಡ ಗಣೇಶ್ ತಾಯಿ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ದೊಣ್ಣೆಯಿಂದ ಬಲವಾಗಿ ಏಟು ಬಿದ್ದ ಪರಿಣಾಮ ತಾಯಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಳಿಕ ತಾಯಿಯ ದೇಹವನ್ನು ಆರೋಪಿ ರಸ್ತೆಮೇಲೆ ಹಾಕಿ ಹೋಗಿದ್ದಾನೆ.
ಇಂದು ಬೆಳಗ್ಗೆ ಗ್ರಾಮಸ್ಥರು ಓಡಾಡುವಾಗ ಶವವನ್ನು ನೋಡಿದಾಗ ಕೃತ್ಯ ಬೆಳಕಿಗೆ ಬಂದು, ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬಣಕಲ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ತನ್ನ ಕೃತ್ಯವನ್ನು ಆರೋಪಿ ಒಪ್ಪಿಕೊಂಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv