ತುಮಕೂರು: ಅಮ್ಮಾ ನಾನೇ ಮ್ಯಾಗಿ ಮಾಡುತ್ತೀನಿ ಎಂದು ಗ್ಯಾಸ್ ಸ್ಟೌವ್ ಹಚ್ಚಿದ ಬಾಲಕ ಮೃತಪಟ್ಟ ಘಟನೆ ತುಮಕೂರು ನಗರದ ಕ್ರಿಶ್ಚಿಯನ್ ಸ್ಟ್ರೀಟ್‍ನಲ್ಲಿ ನಡೆದಿದೆ.
ನೋಯಲ್ ಪ್ರಸಾದ್(7) ಮೃತಪಟ್ಟ ಬಾಲಕ. ನೋಯಲ್ ಅಮ್ಮಾ ನಾನೇ ಮ್ಯಾಗಿ ತಯಾರಿಸುತ್ತೇನೆ ಎಂದು ತನ್ನ ತಾಯಿ ಬಳಿ ಹೇಳಿ ಗ್ಯಾಸ್ ಸ್ಟೌಚ್ ಹಚ್ಚಿದ್ದಾನೆ. ಈ ವೇಳೆ ಗ್ಯಾಸ್ ಸೋರಿಕೆ ಆಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಬಾಲಕ ಮೃತಪಟ್ಟಿದ್ದಾನೆ.
ನೋಯಲ್ ಗ್ಯಾಸ್ ಸ್ಟೌವ್ ಆನ್ ಮಾಡಿದ ನಂತರ ಲೈಟರ್ ನಲ್ಲಿ ಬೆಂಕಿ ಹಚ್ಚುವುದಕ್ಕೆ ಲೇಟ್ ಮಾಡಿದ್ದಾನೆ. ಆದರೆ ಅಷ್ಟರಲ್ಲಾಗಲೇ ಗ್ಯಾಸ್ ಲೀಕ್ ಆಗಿ ನೋಯಲ್ ಸುತ್ತಮುತ್ತ ಹರಡಿಕೊಂಡಿದೆ. ನಿಧಾನವಾಗಿ ಬೆಂಕಿ ಹಚ್ಚಿದಕ್ಕೆ ನೋಯಲ್ ಗೆ ಬೆಂಕಿ ಹೊತ್ತಿಕೊಂಡಿದೆ.
ಈ ಘಟನೆಯಿಂದ ನೋಯಲ್‍ನನ್ನು ರಕ್ಷಣೆ ಮಾಡುವಷ್ಟರಲ್ಲಿ ಆತನಿಗೆ ತುಂಬಾ ಗಂಭೀರವಾಗಿ ಗಾಯಗಳಾಗಿತ್ತು. ತಕ್ಷಣ ಆತನ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ನೋಯಲ್ ಮೃತಪಟ್ಟಿದ್ದಾನೆ.
ಈ ಬಗ್ಗೆ ತುಮಕೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.