ಕೊಪ್ಪಳ: ತಾಯಿಯೇ ದೇವರು ಎನ್ನುತ್ತಾರೆ. ಆದರೆ, ಇಲ್ಲೊಬ್ಬ ಪುತ್ರ ಎರಡು ದಿನದ ಹಿಂದೆ ತನ್ನ ಹೆತ್ತಮ್ಮನನ್ನೇ ಒಂಟಿಯಾಗಿ ಕೊಪ್ಪಳದಲ್ಲಿರುವ ದೇವಸ್ಥಾನದ ಬಳಿ ಬಿಟ್ಟ ತೆರಳಿದ್ದಾನೆ.
ಅಜ್ಜಿಯನ್ನು ನೋಡಿದ ಸ್ಥಳೀಯರು ಹಿರಿಯ ನಾಗರಿಕರ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು, ಪ್ರಸ್ತುತ ಅವರು ಅಜ್ಜಿಯನ್ನು ರಕ್ಷಣೆ ಮಾಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ. ವೃದ್ಧೆ ತನ್ನ ಹೆಸರು ಖಾಸೀಂ ಬಿ, ತನ್ನದು ಉಜ್ಜಯಿನಿ ಗ್ರಾಮ ಎಂದು ಹೇಳಿಕೊಂಡಿದ್ದಾರೆ. ಇತರ ವಿವರಗಳನ್ನು ಸರಿಯಾಗಿ ನೀಡಿಲ್ಲ. ಅಜ್ಜಿಯಿಂದ ಹೆಚ್ಚಿನ ವಿವರಗಳಾಗಲಿ ಅಥವಾ ದಾಖಲೆಗಳಾಗಲಿ ದೊರಕಿಲ್ಲ. ಆದರೆ ವೃದ್ಧೆಗೆ ಸುಮಾರು 80 ವರ್ಷ ವಯಸ್ಸಾಗಿದೆ ಎಂದು ಅಧಕಾರಿಗಳು ಅಂದಾಜಿಸಿದ್ದಾರೆ. ಇದನ್ನೂ ಓದಿ: ಪಾಕ್‍ನಲ್ಲಿದ್ದ 1,200 ವರ್ಷಗಳಷ್ಟು ಹಳೆ ಹಿಂದೂ ದೇವಾಲಯ ಮರುಸ್ಥಾಪಿಸಲು ಅನುಮತಿ
ನಡೆದಿದ್ದೇನು?
ಎರಡು ದಿನದ ಹಿಂದೆ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಮಗನೊಡನೆ ಖಾಸೀಂ ಬಿ ಬಂದಿದ್ದಾರೆ. ನಂತರ ಆಕೆಯ ಮಗ ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಹಾಗೂ ತನ್ನ ಮೊಬೈಲ್ ನಂಬರ್ ಇದೆ ಎಂದು ಖಾಲಿ ಹಾಳೆ ಕೈಗಿತ್ತು ತೆರಳಿದ್ದಾನೆ.
ರಾತ್ರಿಯಾದರೂ ಅಜ್ಜಿ ಬಳಿ ಯಾರೂ ಬರದಿರುವುದನ್ನು ಗಮನಿಸಿದ ಸ್ಥಳೀಯರು ತಿನ್ನಲು ಆಹಾರ ನೀಡಿದ್ದಾರೆ. ಮಲಗಲು ಹಾಸಿಗೆ, ದಿಂಬು ನೀಡಿದ್ದಾರೆ. ಬಳಿಕ ಮೊಬೈಲ್ ಪರಿಶೀಲಿಸಿದಾಗ ಸಿಮ್ ಕಾರ್ಡ್ ಇಲ್ಲದಿರುವುದು ಬೆಳಕಿಗೆ ಬಂದಿದೆ. ಅಜ್ಜಿ ಯಾರು, ಯಾವ ಊರು ಎಂಬಿತ್ಯಾದಿ ವಿವರ ಸಿಕ್ಕಿಲ್ಲ. ಕೂಡಲೇ ಹಿರಿಯ ನಾಗರಿಕರ ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಇದನ್ನೂ ಓದಿ: ಅನಿವಾಸಿ ಭಾರತೀಯರಿಗೆ ಪಂಜಾಬ್ ಸರ್ಕಾರ ಹೊಸ ನೀತಿಯನ್ನು ತರಲಿದೆ: ಕುಲದೀಪ್ ಸಿಂಗ್
ರಾಷ್ಟ್ರೀಯ ಹಿರಿಯ ನಾಗರಿಕರ ಸಹಾಯವಾಣಿ ಕ್ಷೇತ್ರದ ಪ್ರತಿಕ್ರಿಯೆ ಅಧಿಕಾರಿ ಮುತ್ತಣ್ಣ ಗುದ್ನೆಪ್ಪನವರ್ ಹಾಗೂ ಇತರ ಸಿಬ್ಬಂದಿ ತೆರಳಿ ಅಜ್ಜಿಯನ್ನು ರಕ್ಷಿಸಿದ್ದಾರೆ. ಪೊಲೀಸ್ ಠಾಣೆಗೆ ಮಾಹಿತಿ ನೀಡಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.