ಬೆಳಗಾವಿ: ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿದ್ದಕ್ಕೆ ತಂದೆಯನ್ನೇ ಮಗ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೈನಾಪುರ ಗ್ರಾಮದಲ್ಲಿ ನಡೆದಿದೆ.
ರಾಮಸಿದ್ದ ಖೋತ್ (53) ಮಗನಿಂದಲೇ ಕೊಲೆಯಾದ ದುರ್ದೈವಿಯಾಗಿದ್ದು ಸಂತೋಷ್ ಖೋತ್(27) ತಂದೆಯನ್ನೇ ಕೊಲೆ ಮಾಡಿದ ಪಾಪಿ ಪುತ್ರನಾಗಿದ್ದಾನೆ. ಕೆಲಸಕ್ಕೆ ಹೋಗದೆ ಸೋಮಾರಿ ತಿರುಗುತ್ತಿದ್ದ ಸಂತೋಷ್‍ಗೆ ಪೋಲಿಯಾಗಿ ಅಲೆಯಬೇಡ ಎಂದು ತಂದೆ ರಾಮಸಿದ್ದ ಬುದ್ಧಿವಾದ ಹೇಳಿದ್ದರು.
ಇದರಿಂದ ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು,ಕೈ ಕೈ ಮಿಲಾಯಿಸುವ ಹಂತ ತಲುಪಿದೆ. ಜಗಳದಲ್ಲಿ ತಂದೆಯನ್ನು ಸಂತೋಷ್ ತಳ್ಳಿದ್ದಾನೆ. ತಳ್ಳಿದ ರಭಸಕ್ಕೆ ಸಿಮೆಂಟ್ ಶೀಟ್ ಮೇಲೆ ಬಿದ್ದ ರಾಮಸಿದ್ದ ಅವರ ತಲೆಗೆ ಬಲವಾದ ಏಟು ಬಿದ್ದದ್ದರಿಂದ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಆರೋಪಿ ಸಂತೋಷ್ ನನ್ನು ಬಂಧಿಸಿ ಐಪಿಸಿ ಸೆಕ್ಷನ್ 302ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.