ಯಾದಗಿರಿ: ಮದ್ಯ ಕುಡಿಯಲು ಹಣ ಕೊಡಲಿಲ್ಲ ಎಂಬ ಕಾರಣಕ್ಕಾಗಿ ಮಗನೇ ತಾಯಿಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಜಾಲಿಬೆಂಚಿ ಗ್ರಾಮದಲ್ಲಿ ನಡೆದಿದೆ.
ಅಮಾತೆವ್ವ ಕಂಪ್ಲಿ(70) ಮಗನಿಂದಲೇ ಹತಳಾದ ತಾಯಿ. ಅಮಾತೆವ್ವರ ಮಗ ರಾಮಣ್ಣ ತಾಯಿಗೆ ಪ್ರತಿಬಾರಿಯೂ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದನು. ಸೋಮವಾರ ತಾಯಿ ಹಣ ಕೊಡದಕ್ಕೆ ಕುಡಿದ ಅಮಲಿನಲ್ಲಿ ತಾಯಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಅಮಾತೆವ್ವ ತಾವು ಪಡೆಯುತ್ತಿದ್ದ ವೃದ್ಧಾಪ್ಯ ವೇತನವನ್ನು ಕೂಡಿಟ್ಟುಕೊಂಡಿದ್ದರು. ಹೀಗಾಗಿ ತಾಯಿಯ ಈ ವೃದ್ಧಾಪ್ಯ ವೇತನದ ಮೇಲೆ ಮಗ ರಾಮಣ್ಣ ಕಣ್ಣು ಹಾಕಿದ್ದು, ಹಣ ಕೊಡುವಂತೆ ಕೇಳುತ್ತಿದ್ದನು. ದೊಣ್ಣೆಯಿಂದ ಹಲ್ಲೆಗೊಳಗಾದ ಅಮಾತೆವ್ವ ಗಂಭೀರವಾಗಿ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸದ್ಯ ಪೊಲೀಸರು ಆರೋಪಿ ರಾಮಣ್ಣನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.