ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮನೆಯಲ್ಲಿ ಕೂಡಿ ಹಾಕಿದ ಪಾಪಿ ಮಗ

Public TV
1 Min Read
police station nandhini layout bangalore police 2b3nbc6

ಬೆಂಗಳೂರು: ಆಸ್ತಿಗಾಗಿ ಹೆತ್ತ ತಾಯಿಯನ್ನೇ ಮಗ ಮನೆಯಲ್ಲಿ ಕೂಡಿ ಹಾಕಿದ್ದ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.

ಲಗ್ಗೆರೆ ನಿವಾಸಿ ವೆಂಕಟೇಶ್ ಗೌಡ ತನ್ನ ತಾಯಿ ಮುನಿಯಮ್ಮರನ್ನು(60) ಕೂಡಿಹಾಕಿದ್ದನು. ಮುನಿಯಮ್ಮರಿಗೆ ಲೋಹಿತ್, ವೆಂಕಟೇಶ್ ಗೌಡ ಅನ್ನೋ ಇಬ್ಬರು ಗಂಡು ಮಕ್ಕಳಿದ್ದಾರೆ. ದೊಡ್ಡ ಮಗನಿಗೆ ಲಗ್ಗೆರೆಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಮತ್ತು ಎರಡನೇ ಮಗನಿಗೆ ಹೆಸರುಗಟ್ಟದ ಮನೆಯನ್ನು ವಿಭಾಗ ಮಾಡಿ ಕೊಡಲಾಗಿತ್ತು. ಆದರೆ ಎರಡನೇ ಮಗ ವೆಂಕಟೇಶ್ ಲಗ್ಗೆರೆಯ ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ಕಣ್ಣು ಹಾಕಿದ್ದನು. ಆ ಕಟ್ಟಡದಲ್ಲಿ 60 ಸಾವಿರ ರೂ. ಬಾಡಿಗೆ ಬರ್ತಿದ್ದು, ಅದು ನನಗೆ ಬೇಕು ಅಂತ ವೆಂಕಟೇಶ್ ತಾಯಿ ಜೊತೆ ಜಗಳ ಶುರುಮಾಡಿದ್ದನು. ಇದಕ್ಕೆ ತಾಯಿ ನಿರಾಕರಿಸಿದ ಹಿನ್ನೆಲೆ ಅವರನ್ನು ವೆಂಕಟೇಶ್ ಮನೆಯಲ್ಲೇ ಕೂಡಿ ಹಾಕಿದನು. ಹಾಗೆಯೇ ಆಸ್ತಿ ವಿಚಾರವಾಗಿ ಕೋರ್ಟಿನಲ್ಲಿ ಕೇಸ್ ದಾಖಲಿಸಿದ್ದನು.

Police Jeep 1

ವಿಚಾರಣೆ ವೇಳೆ ಮುನಿಯಮ್ಮ ಎಲ್ಲಿ ಹೋದರು ಗೊತ್ತಿಲ್ಲ ಎಂದು ಕೋರ್ಟಿಗೆ ಮಾಹಿತಿ ನೀಡಿದ್ದನು. ಅದರಿಂದ ಅನುಮಾನಗೊಂಡ ಮುನಿಯಮ್ಮರ ಹೆಣ್ಣು ಮಕ್ಕಳು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವೆಂಕಟೇಶ್ ಮನೆ ಪರಿಶೀಲನೆ ಮಾಡಿದ ವೇಳೆ ಮನೆಯ ರೂಮ್‍ವೊಂದರಲ್ಲಿ ತಾಯಿಯನ್ನು ಗೃಹಬಂಧನದಲ್ಲಿಟ್ಟಿರೋದು ಬೆಳಕಿಗೆ ಬಂದಿದೆ.

ಸುಮಾರು 6 ತಿಂಗಳಿಂದ ತಾಯಿಯನ್ನು ಇದೇ ರೀತಿ ಕೂಡಿ ಹಾಕಿದ್ದು, ಸರಿಯಾಗಿ ಆಹಾರ ಕೂಡ ನೀಡದೆ ಮಗ ಚಿತ್ರಹಿಂಸೆ ಕೊಟ್ಟಿದ್ದಾನೆ. ಸದ್ಯ ವೃದ್ಧೆ ಮುನಿಯಮ್ಮರನ್ನು ಅವರ ಹೆಣ್ಣು ಮಕ್ಕಳು ಕರೆದುಕೊಂಡು ಹೋಗಿದ್ದು, ಮಗ ವೆಂಕಟೇಶ್, ಆತನ ಪತ್ನಿ ಸೇರಿದಂತೆ ನಾಲ್ವರ ವಿರುದ್ಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *