– ಕಡೂರು ಪಟ್ಟಣದ ವಿಜಯ ಟಾಕೀಸ್ ಬಳಿ ಕೃತ್ಯ
– ಅಳಿಯ ಹಾಗೂ ಆತನ ಮಗನ ವಿರುದ್ಧ ದೂರು ನೀಡಿದ್ದ ಮಾವ
ಚಿಕ್ಕಮಗಳೂರು: ತಾಯಿ ಮನೆಗೆ ಬರಲಿಲ್ಲ ಎಂದು ಅಳಿಯ ಸೋದರ ಮಾವನ ಮೇಲೆಯೇ ಮಚ್ಚು ಬೀಸಿರುವ ಘಟನೆ ಜಿಲ್ಲೆಯ ಕಡೂರು (Kaduru) ಪಟ್ಟಣದ ವಿಜಯಲಕ್ಷ್ಮಿ ಟಾಕೀಸ್ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಕಡೂರು ಪಟ್ಟಣದಲ್ಲಿ ಆಟೋ ಓಡಿಸುತ್ತಿರುವ ಭರತ್ ಮಾವನ ಮೇಲೆ ಮಚ್ಚು ಬೀಸಿದ ಯುವಕ. ಭರತ್ ತಾಯಿ ಗಂಡನ ಜೊತೆ ಜಗಳವಾಡಿ ತವರು ಸೇರಿದ್ದರು. ಗಂಡನ ಮನೆಗೆ ಬಂದಿರಲಿಲ್ಲ. ಮಗ ಭರತ್ ತಾಯಿ ಬಳಿ ಮನೆಗೆ ಬರುವಂತೆ ಹೇಳಿದ್ದನು. ಜೊತೆಗೆ ತಾಯಿಯನ್ನು (Mother) ಮನೆಗೆ ಕಳುಹಿಸುವಂತೆ ಮಾವ ಮಹಾಲಿಂಗ ಅವರ ಬಳಿ ಹೇಳಿದ್ದನು. ಆದರೂ ತಾಯಿ ಗಂಡನ ಮನೆಗೆ ಹೋಗಿರಲಿಲ್ಲ. ಇದನ್ನೂ ಓದಿ: KSRTC Ticket Price Hike – ಬೆಂಗಳೂರಿನಿಂದ ನಿಮ್ಮ ಜಿಲ್ಲೆಗೆ ಎಷ್ಟು ದರ ಏರಿಕೆ? ಇಲ್ಲಿದೆ ಕಂಪ್ಲೀಟ್ ಲಿಸ್ಟ್
ಈ ಬಗ್ಗೆ ಮಾವ ಮಹಾಲಿಂಗ ಭರತ್ ಹಾಗೂ ಆತನ ತಂದೆ ರಾಮಸ್ವಾಮಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ನೀವು ನನ್ನ ತಂಗಿಗೆ ಸಾಕಷ್ಟು ಹಿಂಸೆ ನೀಡಿದ್ದೀರಿ. ಹಾಗಾಗಿ ಅವಳನ್ನು ಕಳಿಸುವುದಿಲ್ಲ. ಅಪ್ಪ-ಮಗ ಇಬ್ಬರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಆದರೂ ಭರತ್ ಮೇಲಿಂದ ಮೇಲೆ ಫೋನ್ ಮಾಡಿ ಅಮ್ಮನನ್ನು ಕಳುಹಿಸುವಂತೆ ಬಲವಂತ ಮಾಡಿದ ಪರಿಣಾಮ ಮಾವ ಮಹಾಲಿಂಗ ಡಿಸೆಂಬರ್ 31ರಂದು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಮದುವೆ ಮಾಡಿಸಿ 4 ಲಕ್ಷ ಹಣ ಪಡೆದು ಬ್ರೋಕರ್ ಎಸ್ಕೇಪ್ – ಇತ್ತ ಮದುವೆಯಾದ ಹೆಣ್ಣೂ ಪರಾರಿ
ಪೊಲೀಸ್ ಸ್ಟೇಷನ್ ಗೆ ಹೋಗಿ ದೂರು ನೀಡಿದ್ದಾರೆ ಎಂಬ ಸಿಟ್ಟಿನಿಂದ ಜ.2 ರಂದು ಭರತ್ ಹಾಡಹಗಲೇ ನಡು ರಸ್ತೆಯಲ್ಲಿ ಮಾವನ ಮೇಲೆ ಮನಸ್ಸು ಇಚ್ಚೆ ಮಚ್ಚು ಬೀಸಿದ್ದಾನೆ. ಕಡೂರು ಪಟ್ಟಣದಲ್ಲಿ ಆಟೋ ಡ್ರೈವರ್ ವೃತ್ತಿ ಮಾಡುತ್ತಿರುವ ಭರತ್ ಆಟೋ ಹಿಂದೆ ಲಾಂಗ್ ಇಟ್ಟು ಮಾವನನ್ನ ಹುಡುಕಾಡಿದ್ದಾನೆ. ಕಡೂರು ಪಟ್ಟಣದ ವಿಜಯಲಕ್ಷ್ಮಿ ಟಾಕೀಸ್ ಬಳಿ ಕ್ಯಾಂಟೀನ್ ಹತ್ತಿರ ಟೀ ಕುಡಿಯುತ್ತಿದ್ದ ಮಾವನ ಮೇಲೆ ಮನಸ್ಸು ಇಚ್ಛೆ ಲಾಂಗ್ ಬೀಸಿದ್ದಾನೆ. ಲಾಂಗ್ ಬೀಸಿದ ಬಳಿಕ ರಾಜರೋಷವಾಗಿ ಬಂದು ಆಟೋದಲ್ಲಿ ಲಾಂಗ್ ಇಟ್ಟುಕೊಂಡು ಹೋಗಿದ್ದಾನೆ.
ಹಲ್ಲೆಗೊಳಗಾದ ಮಹಾಲಿಂಗ ಅವರ ಸ್ಥಿತಿ ಗಂಭೀರವಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರಾಮಸ್ವಾಮಿ ಹಾಗೂ ಮಗ ಭರತ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಇಬ್ಬರಿಗೂ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.