ಭೋಪಾಲ್: ಸಾಮಾನ್ಯವಾಗಿ ತಮ್ಮ ಮಕ್ಕಳು ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಅಥವಾ ರ್ಯಾಂಕ್ ಪಡೆದುಕೊಂಡರೆ ಪೋಷಕರು ಸಂಭ್ರಮಿಸಿ ಎಲ್ಲರಿಗೂ ಸಿಹಿ ಹಂಚುತ್ತಾರೆ. ಆದರೆ ಇಲ್ಲೊಬ್ಬರು ತಂದೆ, ತನ್ನ ಮಗ ಫೇಲ್ ಆಗಿದಕ್ಕೆ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.
ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸುರೇಂದ್ರ ಕುಮಾರ್ ವ್ಯಾಸ್ ತನ್ನ ಮಗ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಬೀದಿಯಲ್ಲಿ ಪೆಂಡಾಲ್ ಹಾಕಿಸಿ, ಪಟಾಕಿ ಸಿಡಿಸಿ ಹಾಗೂ ಎಲ್ಲರಿಗೂ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆದರೆ ಸಾಕು ಅವರು ಖಿನ್ನತೆಗೆ ಒಳಗಾಗುತ್ತಾರೆ. ಕೆಲವರಂತು ತಮ್ಮ ಜೀವವನ್ನೇ ಕಳೆದುಕೊಳ್ಳುತ್ತಾರೆ. ಆದ್ದರಿಂದ ಈ ಪರೀಕ್ಷೆಯಲ್ಲಿ ನನ್ನ ಮಗ ಕೂಡ ಫೇಲ್ ಆಗಿದ್ದಾನೆ. ಮಕ್ಕಳು ಉತ್ತೀರ್ಣರಾದಾಗ ಮಾತ್ರ ಸಂಭ್ರಮಿಸಬಾರದು. ಅವರು ಫೇಲ್ ಆದಾಗಲೂ ನಾವು ಸಂಭ್ರಮಿಸಬೇಕು. ಇದರಿಂದ ಅವರನ್ನು ನಾವು ಪ್ರೇರೇಪಿಸಿದಂತಾಗುತ್ತದೆ ಎಂದು ತಂದೆ ಹೇಳಿದ್ದಾರೆ.
ಫೇಲ್ ಆದಾಗ ನಾವು ಈ ರೀತಿಯಲ್ಲಿ ಅವರಿಗೆ ಉತ್ತೇಜನ ನೀಡಿದರೆ ಮುಂದೆ ಅವರು ತಮ್ಮ ಜೀವನದಲ್ಲಿ ಗೆಲುವು ಸಾಧಿಸುತ್ತಾರೆ. ಆದ್ದರಿಂದ ನನ್ನ ಮಗನನ್ನು ಪ್ರೇರೇಪಿಸುವ ಉದ್ದೇಶದಿಂದ ಈ ರೀತಿ ಸಂಭ್ರಮಿಸುತ್ತಿದ್ದೇನೆ ಎಂದು ತಿಳಿದರು. ಮಧ್ಯಪ್ರದೇಶದ ಇದೇ ಮೊದಲ ಬಾರಿಗೆ ಮಗ ಫೇಲ್ ಆಗಿದ್ದಕ್ಕೆ ಪಾರ್ಟಿ ಮಾಡಿ ಸಂಭ್ರಮಿಸಿರುವುದು.
ಮಧ್ಯಪ್ರದೇಶದಲ್ಲಿ ಸೋಮವಾರ 10ನೇ ಹಾಗೂ 12 ನೇ ತರಗತಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ಸುಮಾರು 11 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಯತ್ನಿಸಿದ್ದರು. ಅವರಲ್ಲಿ ಆರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.