ಶಿವಮೊಗ್ಗ: ಪ್ರೀತಿ ಮಾಡಿ ಯುವತಿಯೊಂದಿಗೆ ನಾಪತ್ತೆಯಾದ ಯುವಕನ ತಂದೆ-ತಾಯಿ ಪೊಲೀಸರ ಟಾರ್ಚರ್ ತಾಳಲಾಗದೆ ವಿಷ ಸೇವಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಅರಬಿಳಚಿ-ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.
Advertisement
ಈ ಗ್ರಾಮದ ದಶರಥ ಎಂಬ ಯುವಕ ಅಡಕೆ ಬೇಯಿಸುವ ಕೆಲಸಕ್ಕೆ ಹೋಗುತ್ತಿದ್ದ. ಇದೇ ಜಾಗಕ್ಕೆ ಅಡಕೆ ಸುಲಿಯಲು ಬರುತ್ತಿದ್ದ ಸಿಂಧೂ ಎಂಬಾಕೆಯೊಂದಿಗೆ ಸ್ನೇಹ ಬೆಳೆಸಿ ನಂತರ ಅದು ಪ್ರೀತಿಗೆ ತಿರುಗಿದೆ. ಈ ಜೋಡಿ ಹದಿನೈದು ದಿನದ ಹಿಂದೆ ಊರು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ಹುಡುಗಿ ಮನೆಯವರು ಹೊಳೆಹೊನ್ನೂರು ಠಾಣೆಗೆ ದೂರು ನೀಡಿದ್ದರು.
Advertisement
Advertisement
ಹೊಳೆಹೊನ್ನೂರು ಠಾಣೆ ಪೊಲೀಸರು ಹುಡುಗ ದಶರಥನ ಅಪ್ಪ ಕುಮಾರಪ್ಪ ಹಾಗೂ ಅಮ್ಮ ನೀಲಾವತಿ ಅವರನ್ನು ಠಾಣೆಗೆ ಕರೆಸಿ ಹೊಡೆದಿದ್ದಾರೆ ಅಂತಾ ಹೇಳಲಾಗಿದೆ. ಅಲ್ಲದೇ ಮೂರು ದಿನದ ಒಳಗಾಗಿ ನಿಮ್ಮ ಮಗನನ್ನು ಕರೆದು ತನ್ನಿ ಎಂದು ಎಚ್ಚರಿಕೆ ನೀಡಿ ಮನೆಗೆ ಕಳಿಸಿದ್ದಾರೆ. ಇತ್ತ ಮನೆಯ ಬಳಿಯೂ ಹುಡುಗಿ ಕಡೆಯವರು ಬಂದು ಗಲಾಟೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Advertisement
ಇದರಿಂದ ಬೇಸರಗೊಂಡ ಯುವಕನ ತಂದೆ-ತಾಯಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಸ್ಥಳೀಯರು ತೀವ್ರವಾಗಿ ಅಸ್ವಸ್ಥಗೊಂಡಿರುವ ಇಬ್ಬರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.