– ಕೊನೇ ಕ್ಷಣದ ಫೋಟೋ ಅಷ್ಟೇ ತಾಯಿಗೆ ನೆನಪು
ಅಹಮದಾಬಾದ್: ಇಲ್ಲಿ ಸಂಭವಿಸಿದ ವಿಮಾನ ದುರಂತ (Ahmedabad Plane Crash) ಹೃದಯ ವಿದ್ರಾವಕ ಹಾಗೂ ಆಘಾತಕಾರಿ ಘಟನೆ. ಈ ದುರ್ಘಟನೆ ದೇಶ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲೂ ಜನರನ್ನ ದಿಗ್ಭ್ರಮೆಗೊಳಿಸಿದೆ. ವಿಮಾನದಲ್ಲಿದ್ದ 242 ಜನರ ಪೈಕಿ 241 ಮಂದಿ ಮೃತಪಟ್ಟಿದ್ದು, ಒಬ್ಬೊಬ್ಬರದ್ದೂ ಒಂದೊಂದು ಕರುಳು ಹಿಂಡುವ ಕಥೆಗಳು ಕೇಳಿಬರುತ್ತಿವೆ. ಅದರಂತೆ ಗುಜರಾತ್ (Gujarat) ಮಣಿನಗರದ ನಿವಾಸಿಯೊಬ್ಬರ ಬದುಕು ದುರಂತ ಅಂತ್ಯ ಕಂಡಿರುವುದು ನೋಡಬಹುದು.
ಅಮ್ಮನೊಂದಿಗೆ ಕೊನೆಯ ಫೋಟೋ
ಗುಜರಾತ್‌ನ ಮಣಿನಗರ ನಿವಾಸಿ ಲಾರೆನ್ಸ್ ಡೇನಿಯಲ್ ಅಹಮದಾಬಾದ್ ವಿಮಾನ ಪತನದಲ್ಲಿ ಬದುಕಿನ ದುರಂತ ಅಂತ್ಯ ಕಂಡಿದ್ದಾರೆ. ಲಾರೆನ್ಸ್ ಪ್ರಸ್ತುತ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದರು, ಇತ್ತೀಚೆಗೆ ತಮ್ಮ ತೀರಿಕೊಂಡ ಹಿನ್ನೆಲೆ ಮಣಿನಗರಕ್ಕೆ ಆಗಮಿಸಿದ್ದರು. ಅಪ್ಪನ ಅಂತ್ಯ ಸಂಸ್ಕಾರ ಮುಗಿಸಿ ಹೊರಟಿದ್ದ ಲಾರೆನ್ಸ್ ಡೇನಿಯಲ್ ತಮ್ಮ ಬದುಕಿನ ಯಾತ್ರೆಯನ್ನೇ ಮುಗಿಸಿದ್ದಾರೆ.
ಇತ್ತ ಗಂಡನ ಕಳೆದುಕೊಂಡ ದುಃಖ ಮಾಸುವ ಮುನ್ನವೇ ಮಗನನ್ನು ಕಳೆದುಕೊಂಡ ತಾಯಿ ಮತ್ತೆ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಸಾವಿಗೂ ಮುನ್ನ ಏರ್‌ಪೋರ್ಟ್‌ನಲ್ಲಿ ಮಗನೊಂದಿಗೆ ಕ್ಲಿಕ್ಕಿಸಿಕೊಂಡ ಫೋಟೋವಷ್ಟೇ ತಾಯಿ ಬಳಿ ನೆನಪಾಗಿ ಉಳಿದಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಪತನ – ದುರಂತದಲ್ಲಿ ಮಾರ್ಬಲ್ ವ್ಯಾಪಾರಿ ಪಿಂಕು ಮೋದಿ ಮಕ್ಕಳು ಸಾವು
ಏನಿದು ದುರಂತ?
ಜೂನ್ 12ರಂದು (ಗುರುವಾರ) ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ AI171 ವಿಮಾನ ಅಪಘಾತಕ್ಕೀಡಾಯಿತು. ಮಧ್ಯಾಹ್ನ 13.38ಕ್ಕೆ ಅಹಮದಾಬಾದ್‌ನಿಂದ ಹೊರಟ 12 ವರ್ಷದ ಹಳೆಯ ಬೋಯಿಂಗ್ 787-8 ವಿಮಾನ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿತ್ತು. ವಿಮಾನ ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು. ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತ – ಏರ್ ಇಂಡಿಯಾ ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ವಿಷಾದ
ಇದರಿಂದ ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಬದುಕುಳಿದ ಏಕೈಕ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನದಲ್ಲಿದ್ದ 230 ಪ್ರಯಾಣಿಕರ ಪೈಕಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು ಮತ್ತು ಓರ್ವ ಕೆನಡಾ ಇದ್ದರು. ಬದುಕುಳಿದ ಏಕೈಕ ವ್ಯಕ್ತಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯಾಗಿದ್ದಾರೆ ಎಂದು ಏರ್ ಇಂಡಿಯಾ ಖಚಿತಪಡಿಸಿದೆ.
ಮೇ ಡೇ – ಕೊನೇ ಸಂದೇಶ
ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನವು ರನ್ ವೇ 23ರಿಂದ ವಿಮಾನ ಟೇಕಾಫ್ ಆಗಿತ್ತು. ಹಾರಿದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್ `ಮೇ ಡೇ.. ಮೇ ಡೇ..’ ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು. ಮೇ ಡೇ ಅಂದ್ರೆ ವಿಮಾನ ಡೇಂಜರ್‌ನಲ್ಲಿದ್ದು ತುರ್ತು ಅವಶ್ಯಕತೆ ಬಗ್ಗೆ ಎಮರ್ಜೆನ್ಸಿ ಕರೆ ಮಾಡುವುದು. ಎಟಿಸಿ ಮತ್ತೆ ಕರೆ ಮಾಡಿದಾಗ ವಾಪಸ್ ಪ್ರತಿಕ್ರಿಯೆ ಬಂದಿರಲಿಲ್ಲ. ಪೈಲಟ್ ಮೇ ಡೇ ಸಂದೇಶ ಕೊಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತ್ತು. ಇದನ್ನೂ ಓದಿ: ಇರಾನ್‌ನ ನ್ಯೂಕ್ಲಿಯರ್, ಮಿಲಿಟರಿ ಕೇಂದ್ರಗಳ ಮೇಲೆ ಇಸ್ರೇಲ್ ವಾಯುದಾಳಿ – ಪ್ಯಾರಾಮಿಲಿಟರಿ ಮುಖ್ಯಸ್ಥ, ಇಬ್ಬರು ವಿಜ್ಞಾನಿಗಳ ಹತ್ಯೆ