ಬೆಂಗಳೂರು: ದಸರಾ ಬಂದರೆ ಕಣ್ಮುಂದೆ ಬರುವುದೇ ಮೈಸೂರು, ಮೈಸೂರು ಅರಮನೆ, ಅಂಬಾರಿ ಜೊತೆಗೆ ದಸರಾ ಹಬ್ಬದ ವಿಶೇಷ ಬೊಂಬೆಗಳು. ಬೊಂಬೆಗಳ ಹಬ್ಬದಲ್ಲಿ ಇಲ್ಲೊಬ್ಬ ಮಗ ತನ್ನ ತಾಯಿಗಾಗಿ ಬೆಂಗಳೂರಿನಲ್ಲಿ ಮೈಸೂರು ಅರಮನೆ ನಿರ್ಮಿಸಿದ್ದಾನೆ.
ಅನೇಕ ವರ್ಷಗಳಿಂದ ತಾಯಿ ತ್ರಿಪುರ ಸಂಪತ್‍ಗೆ ಮನೆಯಲ್ಲಿ ನೂರಾರು ಬೊಂಬೆಗಳನ್ನು ಕೂರಿಸಿ ಹಬ್ಬವನ್ನು ಮಾಡಿಕೊಂಡು ಬಂದಿದ್ದಾರೆ. ದಸರಾ ಬೊಂಬೆಗಳ ಜೊತೆ ಅರಮನೆಯ ಮಾದರಿಯನ್ನು ತಂದು ಕೂರಿಸೋಣ ಎಂದು ತಾಯಿ ಆಸೆಪಟ್ಟಿದ್ದಾರೆ. ಮಗ ವಸಂತ ಕುಮಾರ್ ಹೊರಗಿನಿಂದ ಯಾಕೆ ತರುವುದು ನಾನೇ ಅರಮನೆ ಮಾಡಿಕೊಡುತ್ತೇನೆ ಎಂದು ಅರಮನೆಯನ್ನು ಮರದಿಂದ ಮಾಡಿದ್ದಾರೆ.
ತಾಯಿಯ ಆಸೆಯನ್ನು ಪೂರೈಸಲು ನಮ್ಮ ಯಜಮಾನರು ಎಂಟು ತಿಂಗಳು ಶ್ರಮ ಪಟ್ಟಿದ್ದಾರೆ. ರಾತ್ರಿ ಕೆಲಸದಿಂದ ಬಂದ ಮೇಲೆ ಅರಮನೆ ಮಾಡುವ ಕೆಲಸದಲ್ಲಿ ತೊಡಗುತ್ತಿದ್ದರು. ಮೈಸೂರು ಅರಮನೆ ಹೇಗಿದೇಯೋ ಅದೇ ರೀತಿ ಪೈಟಿಂಗ್ ಮಾಡಿ ಲೈಟ್ಸ್ ಹಾಕಿ ಮಾಡಿದರು ಎಂದು ವಸಂತ ಕುಮಾರ್ ಪತ್ನಿ ನಂದಿನಿ ತಿಳಿಸಿದ್ದಾರೆ.
ದಸರಾ ಹಬ್ಬಕ್ಕಾಗಿ ತಾಯಿಯ ಆಸೆಯನ್ನು ಪೂರೈಸಲು ಅರಮನೆ ಮಾಡಿರುವ ವಸಂತ ಕುಮಾರ್ ಅವರ ಕಲೆಯನ್ನು ನೋಡಿ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.